ಬೆಂಗಳೂರು| ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ ಕಾಲೇಜು : ಆರೋಪ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕನ್ನಡದಲ್ಲಿ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ತೆಗೆದು ಹಾಕಿರುವ ಘಟನೆ ಬೆಂಗಳೂರಿನ ಕೋಣನಕುಂಟೆಯ ಖಾಸಗಿ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಜೂ.12ರಂದು ಖಾಸಗಿ ಕಾಲೇಜೊಂದರ ರಾಸಾಯನಶಾಸ್ತ್ರ ಉಪನ್ಯಾಸಕ ಅರುಣ್ ಎಂಬುವರು ಪಾಠ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯೊಬ್ಬರು ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದ್ದು, ಉಪನ್ಯಾಸಕ ಅರುಣ್ ಸಹ ಆ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ್ದಾರೆ. ಆದರೆ, ತರಗತಿಯ ಮತ್ತೊಬ್ಬ ವಿದ್ಯಾರ್ಥಿನಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ‘ನನಗೆ ಕನ್ನಡ ಬಾರದಿದ್ದರೆ ಹೇಗೆ ಪಾಠ ಅರ್ಥ ಮಾಡಿಕೊಳ್ಳಲಿ? ಇಂಗ್ಲಿಷ್ನಲ್ಲಿ ಮಾತ್ರ ಮಾತನಾಡಬೇಕು' ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಪನ್ಯಾಸಕರು ಸಂಯಮ ಕಳೆದುಕೊಳ್ಳದೇ, ‘ಕನ್ನಡ ಈ ನೆಲದ ಭಾಷೆ. ಇಲ್ಲಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೇನು ತಪ್ಪು ಅಲ್ಲ' ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಆ ವಿದ್ಯಾರ್ಥಿನಿಯು ಉಪನ್ಯಾಸಕರ ವಿರುದ್ಧ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಕಾಲೇಜಿನ ಆಡಳಿತ ಮಂಡಳಿ, ಮರುದಿನ ಉಪನ್ಯಾಸಕ ಅರುಣ್ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ಒಪ್ಪದಿದ್ದಕ್ಕೆ ಅರುಣ್ ಅವರ ಪುತ್ರಿ ಇದೇ ಕಾಲೇಜು ಸಂಸ್ಥೆಯ ಮತ್ತೊಂದು ಶಾಖೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಗಳ ಟಿಸಿ ಹಾಗೂ ಇತರೆ ದಾಖಲೆ ಕೊಡುವುದಿಲ್ಲವೆಂದು ಬೆದರಿಕೆ ಹಾಕಲಾಗಿದ್ದು, ಪುತ್ರಿಯ ಭವಿಷ್ಯ, ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾಗಿ ಉಪನ್ಯಾಸಕ ಅರುಣ್ ಅವರೇ ಸ್ವತಃ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಕನ್ನಡ ಮಾತನಾಡಿದ್ದು ತಪ್ಪೇ?: ಉಪನ್ಯಾಸಕ ಅರುಣ್ ಅವರು ವಿಡಿಯೋದಲ್ಲಿ ಮಾತನಾಡುತ್ತಾ, ಕನ್ನಡದಲ್ಲಿ ಮಾತನಾಡಿದ್ದು ತಪ್ಪೇ?, ನಾನು ಕೆಲಸಕ್ಕೆ ರಾಜೀನಾಮೆ ಕೊಡದಿದ್ದರೆ, ನಿನ್ನ ಮಗಳ ಯಾವುದೇ ವ್ಯಾಸಂಗ ದಾಖಲೆಗಳನ್ನು ಕೊಡುವುದಿಲ್ಲ ಎಂದು ಬೆದರಿಕೆ ಹಾಕಲಾಯಿತು. ಕೊನೆಗೆ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ರಾಜೀನಾಮೆ ಕೊಟ್ಟೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ನನ್ನ ಕೆಲಸ ಕಳೆದುಕೊಳ್ಳುವಂತಾಗಿದ್ದು, ಕನ್ನಡನಾಡಿನಲ್ಲಿ ಈ ನೆಲದ ಭಾಷೆಯನ್ನು ಮಾತನಾಡಬಾರದೆಂದರೆ ಹೇಗೆ? ನನಗಾದ ರೀತಿಯಲ್ಲಿ ಬೇರೆ ಯಾವುದೇ ಶಿಕ್ಷಕರಿಗೆ ಆಗಬಾರದು. ಇದಕ್ಕೆ ನ್ಯಾಯ ಸಿಗಬೇಕು ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮತ್ತೆ ಕೆಲಸ ನೀಡುವ ಭರವಸೆ: ಉಪನ್ಯಾಸಕ ಅರುಣ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಖಾಸಗಿ ಕಾಲೇಜಿನ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕನಿಗೆ ಮತ್ತೆ ಕೆಲಸ ನೀಡುವ ಬಗ್ಗೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.







