ಬೆಂಗಳೂರು | ಸುಪಾರಿ ಕೊಟ್ಟು ಗೆಳೆಯನ ಸುಲಿಗೆ : ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಪಾರ್ಟಿಗೆಂದು ಗೆಳೆಯನನ್ನು ಪಬ್‍ಗೆ ಕರೆಯಿಸಿ, ಸುಪಾರಿ ಕೊಟ್ಟು ಸುಲಿಗೆ ಮಾಡಿಸಿದ ಆರೋಪದಡಿ ಇಬ್ಬರು ಸ್ನೇಹಿತರ ವಿರುದ್ಧ ಇಲ್ಲಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಚಂದನ್ ಸುಲಿಗೆಗೊಳಗಾದ ಯುವಕ. ಮೇ 1ರಂದು ಚಂದನ್‍ಗೆ ಪವನ್ ಮತ್ತು ಅಚಲ್ ಎಂಬ ಇಬ್ಬರು ಸ್ನೇಹಿತರು ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‍ಗೆ ಬರಲು ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಸೇರಿ ಪಾರ್ಟಿ ಮಾಡಿದ್ದರು.
ನಂತರ ಜಾಲಿ ರೈಡ್ ಹೋಗೋಣ ಎಂದು ಚಂದನ್ ಕಾರಿನಲ್ಲೇ ಏರ್ ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನ, ನಗದು ದೋಚಿ ಪರಾರಿಯಾಗಿದ್ದರು.
ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡುವುದು ಬೇಡವೆಂದು ಚಂದನ್ ಮನವೊಲಿಸಿದ್ದರು. ಇದಾದ 1 ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ.
ಪೊಲೀಸ್ ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಪಾರಿ ನೀಡಿ, ಸುಲಿಗೆ ಮಾಡಿಸಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾಗಿ ಪೊಲೀಸರು ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.





