ದೇಶದಲ್ಲಿ ಅಘೋಷಿತ ಯುದ್ದ ನಡೆಯುತ್ತಿದೆ : ಕ್ಲಿಫ್ಟನ್ ಡಿ.ರೊಝಾರಿಯೊ
ಗಾಝಾದಲ್ಲಿ ಇಸ್ರೇಲ್ ನರಮೇಧವನ್ನು ಖಂಡಿಸಿ 'ರಾಷ್ಟ್ರೀಯ ಸೌಹಾರ್ದ ದಿನ'

ಬೆಂಗಳೂರು : ದೇಶದಲ್ಲಿ ದಲಿತರು, ಮಹಿಳೆಯರು ಹಾಗೂ ಮುಸ್ಲಿಮರ ಮೇಲೆ ಪ್ರತಿನಿತ್ಯ ಹಲ್ಲೆ, ಅತ್ಯಾಚಾರ ಪ್ರಕರಣಗಳು ಅಘೋಷಿತ ಯುದ್ಧದಂತೆ ನಡೆಯುತ್ತಿವೆ ಎಂದು ಸಿಪಿಐಎಂಎಲ್‍ನ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೋ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ಸಿಪಿಐ ಕಚೇರಿ ‘ಘಾಟೇ ಭವನ’ದಲ್ಲಿ ಸಿಪಿಐ, ಸಿಪಿಎಂ, ಸಿಪಿಐಎಂಎಲ್, ಎಸ್‍ಯುಸಿಐ, ಎಐಎಫ್‍ಬಿ ಸೇರಿದಂತೆ ಎಡಪಕ್ಷಗಳ ವತಿಯಿಂದ ಫೆಲೆಸ್ತೀನಿನ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ಆಯೋಜಿಸಿದ್ದ ‘ರಾಷ್ಟ್ರೀಯ ಸೌಹಾರ್ದ ದಿನ’ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಛತ್ತೀಸ್‍ಗಢದಲ್ಲಿ ನೂರಾರು ಆದಿವಾಸಿಗಳನ್ನು ಮಾನವೀಯತೆ ಇಲ್ಲದಂತೆ ಕೊಲ್ಲುತ್ತಿದ್ದಾರೆ. ಸರಕಾರ ಮೃತರ ಶವಗಳನ್ನು ಅವರ ಕುಟುಂಬಗಳಿಗೆ ನೀಡದೆ ಇರುವಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಾ ಘೋಷಿತ ಯುದ್ಧವನ್ನು ನಡೆಸುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳೆಲ್ಲ ಇಸ್ರೇಲ್ ಪರವಾಗಿ ನಿಂತು ಮಾತಾಡುತ್ತಿದ್ದರೆ, ಮೂರನೇ ಪ್ರಪಂಚ ಯುದ್ದ ನಡೆಯುತ್ತಿದೆಯೇನೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಕ್ಲಿಫ್ಟನ್ ಆತಂಕ ವ್ಯಕ್ತಪಡಿಸಿದರು.
ಸಿಪಿಎಂ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಮಾತನಾಡಿ, ಫೆಲೆಸ್ತೀನ್ ಎಷ್ಟು ದಿನ ಉಳಿದಿರುತ್ತದೆ ಎನ್ನುವ ಅನಮಾನ ನಮ್ಮನ್ನು ಕಾಡತೊಡಗಿದೆ. ಫೆಲೆಸ್ತೀನ್ ದೇಶವನ್ನು ಅದರ ಹೆಸರು, ಚರಿತ್ರೆ, ಸಂಸ್ಕೃತಿ, ಜನರ ಜೀವನವನ್ನು ಚರಿತ್ರೆಯಲ್ಲಿ ಇನ್ನಿಲ್ಲದಂತೆ ಮಾಡಬೇಕೆನ್ನುವ ಕೆಲಸವನ್ನು ಇಸ್ರೇಲ್ ನಡೆಸುತ್ತಿದೆ. ಗಾಝಾದಲ್ಲಿ ಆಸ್ಪತ್ರೆ, ನೀರಿನ ವ್ಯವಸ್ಥೆ ಇಲ್ಲವಾಗಿದೆ. ಫೆಲೆಸ್ತೀನಿನ ಜನರನ್ನು ಹಸಿವಿನಿಂದ ನರಳುವಂತೆ ಮಾಡಿದರೆ ನಾವು ಗೆದ್ದಂತೆ ಎಂದು ಇಸ್ರೇಲಿನ ಮಂತ್ರಿ ಆಡಿರುವ ಮಾತು ಗಾಬರಿ ಹುಟ್ಟಿಸುತ್ತದೆ. ಇದು ಅವರ ಕ್ರೂರ ತನಕ್ಕೆ ಮಿತಿ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಸ್ರೇಲ್ ಅಂತರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. 55 ಸಾವಿರಕ್ಕೂ ಹೆಚ್ಚು ಫೆಲೆಸ್ತೀನ್ ಜನರನ್ನು ಕೊಂದುಹಾಕಿದೆ. ಅದರಲ್ಲಿ ಶೇ.60ಕ್ಕೂ ಹೆಚ್ಚು ಜನ ಮಹಿಳೆಯರು ಮತ್ತು ಮಕ್ಕಳಿ. ಇದು ವರ್ಣ ಬೇಧದ ಜನಾಂಗೀಯ ಹತ್ಯೆ. ಅಂತರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್ ನಡೆಸುತ್ತಿರುವ ನರಹತ್ಯೆಗಳನ್ನು ಖಂಡಿಸಿ ಅಲ್ಲಿನ ಪ್ರಧಾನಿಯನ್ನು ಬಂದಿಸಬೇಕು ಎಂದು ಹೇಳಿತ್ತು. ಆದರೆ ಅವರನ್ನು ಬಂದಿಸುವುರಾದರೂ ಯಾರು? ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಯಾರು ಗೌರವ ಸೂಚಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಇಸ್ರೇಲ್-ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಘೋಷಣೆ ಮಾಡಿದರೂ, ಅದನ್ನು ಲೆಕ್ಕಿಸದೇ ಇಸ್ರೇಲ್ ತನ್ನ ನರಹತ್ಯವನ್ನು ಪುನಃ ಪ್ರಾರಂಭಿಸಿದೆ. ಯಹೂದಿಗಳು ಮತ್ತು ಝಿಯೋನಿಸ್ಟ್ ಗಳು ಫೆಲೆಸ್ತೀನ್‍ರನ್ನು ತನ್ನ ವ್ಯಾಪ್ತಿಯೊಳಗೆ ತಂದುಕೊಳ್ಳಬೇಕೆನ್ನುವ ಉದ್ದೇಶದೊಂದಿಗೆ ಇದನ್ನು ಮಾಡುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಫೆಲೆಸ್ತೀನ್ ವಿಚಾರದಲ್ಲಿ ದೇಶದ ನಿಲವು ಬದಲಾಗಿ ಸಂಪೂರ್ಣ ಇಸ್ರೇಲ್ ಪರವಾಗಿದೆ. ಇಸ್ರೇಲ್‍ನ ಝಿಯಾನಿಸಂ ಭಾರತದ ಹಿಂದೂತ್ವ ಎರಡೂ ಒಂದೇ ರೀತಿಯಲ್ಲಿದೆ. ಕೇಂದ್ರ ಸರಕಾರ ಇಸ್ರೇಲ್‍ಗೆ ಬೆಂಬಲ ಸೂಚಿಸುವುದನ್ನು ನಿಲ್ಲಿಸಬೇಕು ಎಂದು ಪ್ರಕಾಶ್ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಜಿ.ರಾಮಕೃಷ್ಣ, ಸಿಪಿಐ ಕಾರ್ಯದರ್ಶಿ ಸಾಥಿ ಸುಂದರೇಶ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಎಸ್‍ಯುಸಿಐ ಕಾರ್ಯದರ್ಶಿ ಶ್ರೀರಾಮ್ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.
‘ರಾಜ್ಯ ಸರಕಾರದ ಮೇಲೂ ಆತಂಕ ಹೆಚ್ಚಾಗಿದೆ. ಕಾಂಗ್ರೆಸ್ ಸರಕಾರ ಫೆಲೆಸ್ತೀನ್ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದು ಎರಡು ವರ್ಷಗಳಿಂದ ತಿಳಿದಿರುವ ವಿಚಾರ. ಕೇಂದ್ರ ಸರಕಾರದ ನೀತಿಗೆ ಪೂರಕವಾಗಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿದೆ. ಫೆಲೆಸ್ತೀನ್ ಬಾವುಟ ಹಿಡಿದುಕೊಂಡರೆ ಅಪರಾಧ ಆಗುತ್ತದೆ, ಕೇಸುಗಳಾಗುತ್ತಿವೆ, ಕೆಲವೊಮ್ಮೆ ಹುಟುಕಾಟ ಮಾಡಿ ಬಂಧಿಸುವ ಪ್ರಕರಣಗಳು ನಡೆದಿವೆ’
-ಡಾ.ಕೆ.ಪ್ರಕಾಶ್, ಸಿಪಿಎಂ ಕಾರ್ಯದರ್ಶಿ







