ರಸ್ತೆ ಬದಿ ಗಿಡಗಳ ಸುತ್ತ ಕಾಂಕ್ರೀಟ್ ತೆರವು, ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯ ನಿರ್ವಹಣೆಗೆ ಸಮಿತಿ ರಚನೆ : ಸಿಎಂ ಆದೇಶ

ಬೆಂಗಳೂರು : ಪರಿಸರಕ್ಕೆ ಮಾರಕವಾದ ನೀರಿನ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯ ನಿರ್ವಹಣೆ ನಿಯಮಗಳ ಜಾರಿ ಮತ್ತು ಮೇಲ್ವಿಚಾರಣೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸರಕಾರಿ ಆದೇಶ ಹೊರಡಿಸಲಾಗಿದೆ.
ಮಂಗಳವಾರ ನಗರದ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ-2025 ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಸಂಬಂಧ ಸರಕಾರಿ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಅನಾವರಣ ಮಾಡಿದರು.
ಇದರ ಜೊತೆಗೆ ರಸ್ತೆ ಬದಿಗಳಲ್ಲಿ, ಬೀದಿ ಬದಿಗಳಲ್ಲಿ ನೆಡುವ ಮರ/ಗಿಡಗಳ ಸುತ್ತ 1 ಮೀಟರ್ ಸುತ್ತಳತೆಯಲ್ಲಿ ಡಾಂಬರು, ಕಾಂಕ್ರೀಟ್ ಮತ್ತು ಸ್ಲಾಬ್‍ಗಳ ತೆರವು ಮಾಡುವ ಕುರಿತ ಸರಕಾರಿ ಆದೇಶವನ್ನೂ ಅವರು ಬಿಡುಗಡೆಗೊಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೊದಲಿಗೆ ನೀರಿನ ಬಾಟಲಿಗಳ ವೈಜ್ಞಾನಿಕ ವಿಲೇವಾರಿಗೆ ವಿಶೇಷ ಗಮನ ನೀಡಿ, ಜಿಲ್ಲೆಯೊಳಗೆ ಉತ್ಪಾದಿಸುವ, ಬಳಸುವ ಮತ್ತು ಮಾರಾಟವಾಗುವ ಪೆಟ್ ಬಾಟಲಿಗಳ ಪ್ರಮಾಣದ ದತ್ತಾಂಶ ಕ್ರೋಢೀಕರಿಸಿ ತ್ಯಾಜ್ಯ ನಿರ್ವಹಣೆ ಮೇಲೆ ನಿಗಾ ಇಡಲು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು, ಆದೇಶ ಬಿಡುಗಡೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಸಮಿತಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳ ವೈಜ್ಞಾನಿಕ ವಿಲೇವಾರಿಗೆ ಕ್ರಮ ವಹಿಸಬೇಕು. ಜನರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಬೇಕು ಎಂದರು.
ಪರಿಸರವನ್ನು ಸಂರಕ್ಷಣೆ, ಅದರ ಬಗೆಗಿನ ಜ್ಞಾನ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಂತ ಅವಶ್ಯ. ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗುತ್ತದೆ. ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಎಂದು ಸಿದ್ದರಾಮಯ್ಯ ಹೇಳಿದರು
ಕರ್ನಾಟಕದಲ್ಲಿ ಪಶ್ಚಿಮ ಘಟ್ಟ, ವೈವಿಧ್ಯಮಯ ಕಾಡು, ನದಿಗಳು, ಜೀವ ಸಂಪತ್ತನ್ನು ನಾವು ಕಾಪಾಡಬೇಕು. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಇದು ಬೋಧಿಸಲಾಗಿರುವ ಪ್ರತಿಜ್ಞಾ ವಿಧಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರಕೃತಿ ನಮಗೆ ನೀಡಿರುವ ಸಕಲ ಸಂಪನ್ಮೂಲದ ಹಿತ-ಮಿತ ಬಳಕೆ ಇಂದಿನ ಅಗತ್ಯವಾಗಿದೆ. ಇಂದು ನಾವು ಐಷಾರಾಮಿ ಜೀವನಕ್ಕಾಗಿ ಅತಿಯಾಗಿ ಸಂಪನ್ಮೂಲ ಬಳಸುತ್ತಿದ್ದು, ಪರಿಸರ ನಾಶವಾಗುತ್ತಿದೆ. ಪ್ರಸ್ತುತದಲ್ಲಿ ಜಗತ್ತಿನ ಮುಂದಿರುವ ದೊಡ್ಡ ಸವಾಲು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ. ಇದಕ್ಕೆ ವೃಕ್ಷ, ಅರಣ್ಯ ನಾಶ ಹಾಗೂ ನಮ್ಮ ಜೀವನ ಶೈಲಿಯೇ ಕಾರಣವಾಗಿದೆ. ಪ್ರತಿಯೊಬ್ಬರೂ ವೃಕ್ಷ ನೆಟ್ಟು ಹಸಿರು ಹೊದಿಕೆ ಹೆಚ್ಚಿಸಿದರೆ ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಬಹುದು ಎಂದರು.
ಇದೇ ವೇಳೆ ‘ಪರಿಸರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಭೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಶೋಕ್ ಪಟ್ಟಣ್, ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







