ಎಂಜಿಎನ್ವಿವೈ ಕ್ರಿಯಾಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ಬಿ.ಎಸ್.ಸುರೇಶ್

ಬಿ.ಎಸ್.ಸುರೇಶ್
ಬೆಂಗಳೂರು : ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಎರಡನೇ ಹಂತದಲ್ಲಿ ಸರಕಾರದಿಂದ ಹಣ ಬಿಡುಗಡೆ ಆಗಿದ್ದರೂ ವೆಚ್ಚ ಮಾಡದ ಮಹಾನಗರ ಪಾಲಿಕೆಗಳ ಮುಖ್ಯಸ್ಥರನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಈ ಯೋಜನೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಹೊರತುಪಡಿಸಿ ಎಲ್ಲ ಮಹಾನಗರ ಪಾಲಿಕೆಗಳ ಆಯುಕ್ತರ ಸಭೆಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು, ಸರಕಾರ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಿದ್ದರೂ ಅದಕ್ಕೆ ಪೂರಕವಾಗಿ ಕಾರ್ಯಯೋಜನೆ ಸಿದ್ಧಪಡಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ, ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಎರಡನೇ ಹಂತದಲ್ಲಿ ಎಲ್ಲ 11 ಮಹಾನಗರ ಪಾಲಿಕೆಗಳಿಗೆ ಒಟ್ಟು 1730 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸುರೇಶ್ ತಿಳಿಸಿದರು.
ಮೈಸೂರು, ವಿಜಯಪುರ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಮತ್ತು ರಾಯಚೂರು ಮಹಾ ನಗರಪಾಲಿಕೆಗಳು ತಮಗೆ ನಿಗದಿಪಡಿಸಲಾದ ಅನುದಾನಕ್ಕೆ ಪೂರಕವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಿವೆ. ಆದರೆ, ಕಲಬುರಗಿ, ತುಮಕೂರು, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳು ಇದುವರೆಗೂ ಕಾರ್ಯಯೋಜನೆ ವರದಿಯನ್ನು ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಒಂದು ದಿನದ ಗಡುವು: ಬುಧವಾರ ಸಂಜೆಯೊಳಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು. ಈ ಗಡುವಿನೊಳಗೆ ವರದಿಯನ್ನು ಸಿದ್ಧಪಡಿಸದಿದ್ದರೆ ಅಂತಹ ಅಧಿಕಾರಿಗಳು ಮತ್ತು ಇಂಜಿನಿಯರ್ಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸುರೇಶ್ ಎಚ್ಚರಿಕೆ ನೀಡಿದರು.
ಪಾಲಿಕೆಗಳಿಗೆ ಎಷ್ಟೆಷ್ಟು ಅನುದಾನ?: ಮೈಸೂರು ಮಹಾನಗರ ಪಾಲಿಕೆಗೆ 250 ಕೋಟಿ ರೂ.ಗಳ ಅನುದಾನದಲ್ಲಿ 6 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಜಯಪುರ ಮಹಾನಗರ ಪಾಲಿಕೆಗೆ 150 ಕೋಟಿ ರೂ., ಬಳ್ಳಾರಿ ಮಹಾನಗರ ಪಾಲಿಕೆಗೆ 127.5 ಕೋಟಿ ರೂ. ದಾವಣಗೆರೆ ಮಹಾನಗರ ಪಾಲಿಕೆಗೆ 127.5 ಕೋಟಿ ರೂ., ತುಮಕೂರು ಮಹಾನಗರ ಪಾಲಿಕೆಗೆ 175 ಕೋಟಿ ರೂ., ಶಿವಮೊಗ್ಗ ಮಹಾನಗರ ಪಾಲಿಕೆಗೆ 127.5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ, ಮಂಗಳೂರು ಮಹಾನಗರ ಪಾಲಿಕೆಗೆ 165 ಕೋಟಿ ರೂ., ಕಲಬುರಗಿ ಮಹಾನಗರ ಪಾಲಿಕೆಗೆ 127.5 ಕೋಟಿ ರೂ., ಬೆಳಗಾವಿ ಮಹಾನಗರ ಪಾಲಿಕೆಗೆ 127.5 ಕೋಟಿ ರೂ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 152.50 ಕೋಟಿ ರೂ. ಹಾಗೂ ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸುರೇಶ್ ತಿಳಿಸಿದರು.







