ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ದಾವಣಗೆರೆ : ಕನ್ನಡ ಸಾಹಿತ್ಯ ಪರಿಷತ್‌ನ ಆರ್ಥಿಕ ಶಿಸ್ತು ಹದಗೆಡಿಸಿರುವ ಹಾಗೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪದಲ್ಲಿನ ಆರ್ಥಿಕ ಅಶಿಸ್ತು ಪರಿಶೀಲನಾ ಸಮಿತಿ ನೀಡುವ ತನಿಖಾ ವರದಿ ಒಂದು ವೇಳೆ ಅಧ್ಯಕ್ಷರ ಪರವಾಗಿದ್ದರೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಿ. ಇಲ್ಲದಿದ್ದರೆ ಕೂಡಲೇ ಚುನಾವಣೆ ನಡೆಸಲು ಕ್ರಮವಹಿಸಲಿ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕಸಾಪ ರಾಜ್ಯಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದ ಕಸಾಪದ ಒಳಗಡೆ ಅಭಿವ್ಯಕ್ತಿ ಸ್ವಾತಂತ್ರ್ಯ ನಾಶವಾಗಿದೆ. ಭಯದ ವಾತಾವರಣ ನಿರ್ಮಾಣ ಮಾಡಿ ಆಡಳಿತ ನಡೆಸಲಾಗುತ್ತಿದೆ. ಇದರಿಂದ ಕಸಾಪ ಹುಟ್ಟುಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಧಕ್ಕೆ ಬಂದಿದೆ. ಈಗಿರುವ ಅಧ್ಯಕ್ಷರಿಂದ ಸಾಹಿತ್ಯ ಚಟುವಟಿಕೆ ಬಿಟ್ಟು ಕೆಟ್ಟ ಚಟುವಟಿಕೆಯೇ ಹೆಚ್ಚು ನಡೆಯುತ್ತಿದೆ ಎಂದು ಆರೋಪಿಸಿದರು.
ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಈಗಿನ ಅಧ್ಯಕ್ಷರು ಸಂಡೂರಿನ ಒಂದು ಮೂಲೆಯಲ್ಲಿ ಸರ್ವಸದಸ್ಯರ ಸಭೆಯನ್ನು ಜೂ.29ರಂದು ನಡೆಸಲು ನಿರ್ಧರಿಸಿದ್ದಾರೆ. ಅಲ್ಲಿ ಕೆಲವೇ ಸದಸ್ಯರು ಸೇರಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಸಂಡೂರಿನಲ್ಲಿ ಸಭೆ ನಡೆಸುವುದನ್ನು ನಾವು ವಿರೋಧಿಸುತ್ತೇವೆ ಹಾಗೂ ತಡೆಯುತ್ತೇವೆ ಎಂದರು.
ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಲೇಖಕಿ ಡಾ.ವಸುಂಧರಾ ಭೂಪತಿ, ರಾಜಕೀಯ ಮುಖಂಡ ಮಹಿಮಾ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸುಕನ್ಯಾ ಇದ್ದರು.







