ಕೆಇಎ: ಪರೀಕ್ಷೆಗಳಿಗೆ ಏಕರೂಪದ ವಸ್ತ್ರಸಂಹಿತೆ ಪ್ರಕಟ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಬಗ್ಗೆ ಸಂಭವಿಸುವ ಗೊಂದಲಗಳನ್ನು ತಡೆಗಟ್ಟಲು ಏಕರೂಪದ ವಸ್ತ್ರಸಂಹಿತೆಯನ್ನು ಪ್ರಕಟ ಮಾಡಲಾಗಿದೆ.
ಮಂಗಳವಾರ ಕೆಇಎ ಪ್ರಕಟನೆ ಹೊರಡಿಸಿದ್ದು, ಪುರುಷ ವಿದ್ಯಾರ್ಥಿಗಳು ಪೂರ್ಣ ತೋಳಿನ ಶರ್ಟ್‌ಗಳನ್ನು ಬಳಸಬಾರದು. ಅರ್ಧ ತೋಳಿನ ಶರ್ಟ್, ಕಾಲರ್ ಇಲ್ಲದ ಶರ್ಟ್‌ಗಳನ್ನು ಧರಿಸಬೇಕು. ಕುರ್ತಾ, ಜೀನ್ಸ್ ಪ್ಯಾಂಟ್‌ಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಅಭ್ಯರ್ಥಿ ಧರಿಸುವ ಬಟ್ಟೆಗಳು ಜಿಪ್ ಜೇಬುಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರಬಾರದು. ಪರೀಕ್ಷಾ ಹಾಲ್‌ಗೆ ಚಪ್ಪಲಿಗೆ ಮಾತ್ರ ಅವಕಾಶವಿದ್ದು, ಶೂ ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತಲೂ ಯಾವುದೇ ಲೋಹದ ಆಭರಣ, ಕಿವಿ ಓಲೆ, ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.
ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ, ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣಗಳನ್ನು ಧರಿಸುವಂತಿಲ್ಲ. ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆಗಳು/ಜೀನ್ಸ್ ಪ್ಯಾಂಟ್‌ಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಅರ್ಧ ತೋಳಿನ ಅಂಗಿ ಧರಿಸಬೇಕು. ಶೂ, ಎತ್ತರವಾದ ಹಿಮ್ಮಡಿ ಚಪ್ಪಲಿಗಳು, ಸ್ಯಾಂಡಲ್‌ಗಳನ್ನು ಧರಿಸಬಾರದು ಹಾಗೂ ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ, ಸ್ಯಾಂಡಲ್‌ಗಳನ್ನು ಬಳಸುವುದನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಕೆಇಎ ಪ್ರಕಟನೆಯಲ್ಲಿ ತಿಳಿಸಿದೆ.







