ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಆದೇಶ ಪ್ರಶ್ನಿಸಿ ಅರ್ಜಿ: ಬೆಸ್ಕಾಂ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ರಾಜ್ಯದಲ್ಲಿ ಸ್ಮಾರ್ಟ್ ಪ್ರಿ-ಪೇಯ್ಡ್ ಮೀಟರ್‌ಗಳನ್ನು ಅಳವಡಿಸುವುದು ಕಡ್ಡಾಯಗೊಳಿಸಿದ ರಾಜ್ಯ ಸರಕಾರದ ಕ್ರಮ ಮತ್ತು ಟೆಂಡರ್ ಪ್ರಕ್ರಿಯೆ ರದ್ದುಕೋರಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್, ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸ್ಮಾರ್ಟ್ ಮೀಟರ್ ಕಡ್ಡಾಯ ಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ಮತ್ತಿಕೆರೆಯ ನಿವಾಸಿ ಎನ್.ಜಯಪಾಲ ಹಾಗೂ ಮುನಿಸ್ವಾಮಿ ಗೌಡ ಮತ್ತು ಕರ್ನಾಟಕ ವಿದ್ಯುತ್ ಸೇನೆ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ಮುಂದಿನ ನಾಲ್ಕು ವಾರಗಳೊಳಗೆ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದೆ.
ವಿಚಾರಣೆ ವೇಳೆ ಬೆಸ್ಕಾಂ ಪರವಾಗಿ ಹಾಜರಾದ ವಕೀಲರು, ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಸಂಬಂಧ ಹೊರಡಿಸಿರುವ ಆದೇಶಂತೆ ಕೇವಲ ಹೊಸದಾಗಿ ಸಂಪರ್ಕ ಪಡೆಯುವ ಮನೆಗಳಿಗೆ ಮಾತ್ರ. ಈಗಾಗಲೇ ಸಂಪರ್ಕ ಹೊಂದಿರುವ ಮನೆಗಳಿಗೆ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಕಡ್ಡಾಯ ಮಾಡಿಲ್ಲ ಎಂಬುದಾಗಿ ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರು, ಸ್ಮಾರ್ಟ್ ಮೀಟರ್‌ಗಳ ಬೆಲೆ ಇತರೆ ರಾಜ್ಯದಲ್ಲಿ 900 ರು.ಗಳಿಗೆ ನಿಗದಿ ಪಡಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಇದರ ಬೆಲೆ ಹೆಚ್ಚು ಬೆಲೆಗೆ ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ಮತ್ತು ಮೀಟರ್‌ಗಳ ವೆಚ್ಚದ ಮೂಲಕ ಗ್ರಾಹಕರನ್ನು ತೀವ್ರ ತೊಂದರೆಗೆ ಸಿಲುಕಿಸಲಾಗುತ್ತದೆ. ಜತೆಗೆ, ಹಳೆಯ ಸಂಪರ್ಕ ಹೊಂದಿರುವ ಗ್ರಾಹಕರಿಗೂ ಕಡ್ಡಾಯ ಮಾಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ಟೆಂಡರ್ ಪಡೆದ ಕಂಪೆನಿಯ ಪರ ವಕೀಲರು, ಟೆಂಡರ್ ಅನ್ನು ಡಿಸೆಂಬರ್ 2024 ರಲ್ಲಿ ನೀಡಲಾಗಿದೆ. ಅದು ಇಂದೂ ಸಹಾ ಜಾರಿಯಲ್ಲಿದೆ. ಈ ಸಂಬಂಧ ಏಕ ಸದಸ್ಯ ಪೀಠದಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಅರ್ಜಿಯಲ್ಲಿ ಇದೇ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.







