ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ಗ್ರಾ.ಪಂ ಸದಸ್ಯರಿಗೆ ಅರಿವು ಮೂಡಿಸಲು ದಿನೇಶ್ ಗೂಳಿಗೌಡ ಮನವಿ

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ನಿಖರತೆ ಹಾಗೂ ತ್ವರಿತ ಪ್ರಕ್ರಿಯೆಗೆ ರಾಜ್ಯದ 5,950 ಗ್ರಾ.ಪಂ.ಗಳ 92 ಸಾವಿರ ಮಂದಿ ಸದಸ್ಯರಿಗೆ ಅಗತ್ಯ ಅರಿವು ಮೂಡಿಸಬೇಕು. ಅಲ್ಲದೆ, ಆ ನಿಟ್ಟಿನಲ್ಲಿ ವಿಶೇಷ ಗ್ರಾಮಸಭೆ, ವಾರ್ಡ್ ಸಭೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಓಗಳಿಗೆ ಸೂಚನೆ ನೀಡಬೇಕು ಎಂದು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಬುಧವಾರ ಈ ಸಂಬಂಧ ಸಿಎಂ, ಡಿಸಿಎಂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿರುವ ಅವರು, ನಿಗದಿತ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಗ್ರಾ.ಪಂ. ಸದಸ್ಯರನ್ನು ಬಳಸಿಕೊಳ್ಳಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಪರಿಚಯ-ಪ್ರಭಾವದಿಂದ ಸಾರ್ವಜನಿಕರಲ್ಲಿ ಸಮೀಕ್ಷೆಯ ಬಗ್ಗೆ ವಿಶ್ವಾಸ ಹೆಚ್ಚುತ್ತದೆ ಎಂದು ಸಲಹೆ ನೀಡಿದ್ದಾರೆ.
ಗ್ರಾಪಂ ಮಟ್ಟದಲ್ಲಿ 8 ಹಂತದಲ್ಲಿ ಅಧಿಕಾರಿ ವರ್ಗವಿದ್ದು, ಇವರ ಸೇವೆಯನ್ನು ಯಾವ ಹಂತದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಬೇಕು. ಕಾರ್ಯದರ್ಶಿಗಳು, ಪಿಡಿಒಗಳು, ಬಿಲ್ ಕಲೆಕ್ಟರ್‍ಗಳು, ಡಾಟಾ ಎಂಟ್ರಿ ಆಪರೇಟರ್‍ಗಳನ್ನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸಮೀಕ್ಷೆಯು ಪಾರದರ್ಶಕತೆ ಮತ್ತು ನಿಖರ-ವಸ್ತುನಿಷ್ಠ ದತ್ತಾಂಶವನ್ನು ಪಡೆಯಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
‘ಸಮೀಕ್ಷೆ ಯಾವ ರೀತಿ ಇರಬೇಕು, ಯಾವೆಲ್ಲ ಮಾಹಿತಿಗಳನ್ನು ಸಂಗ್ರಹಿಸಬೇಕು ಮತ್ತು ಹೇಗೆ ಮಾಡಬೇಕೆಂಬ ಮಾಹಿತಿಯನ್ನು ಗ್ರಾ.ಪಂ.ಸಿಬ್ಬಂದಿಗೆ ತರಬೇತಿಯ ಮೂಲಕ ಸ್ಪಷ್ಟಪಡಿಸಬೇಕು. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತರುವ ಹೊಣೆಯನ್ನು ಆಯಾ ಜಿಲ್ಲೆಗಳ ಡಿಸಿ ಹಾಗೂ ಸಿಇಒಗಳಿಗೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.







