ವಂಚನೆ ಪ್ರಕರಣದ ಆರೋಪಿ ನಿಂಗಪ್ಪನ ಜೊತೆ ನಿರಂತರ ಸಂಪರ್ಕ; ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿದ ಲೋಕಾಯುಕ್ತ ಅಧಿಕಾರಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ನಿವೃತ್ತ ಹೆಡ್ ಕಾನ್ಸ್ಟೇಬಲ್ ನಿಂಗಪ್ಪ ಜೊತೆ ಸಂಪರ್ಕದಲ್ಲಿದ್ದ ಲೋಕಾಯುಕ್ತ ಎಸ್ಪಿ-1 ಆಗಿದ್ದ ಶ್ರೀನಾಥ್ ಮಹದೇವನ್ ಜೋಷಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಆರೋಪಿ ನಿಂಗಪ್ಪನೊಂದಿಗೆ ನಿರಂತರ ಸಂಪರ್ಕ ಹಿನ್ನೆಲೆಯಲ್ಲಿ ಶ್ರೀನಾಥ್ ಮಹದೇವನ್ ಜೋಷಿ ಅವರ ಕೋರಮಂಗಲದ ನಿವಾಸಕ್ಕೆ ಇತ್ತೀಚೆಗಷ್ಟೇ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ತಂಡ ಭೇಟಿ ನೀಡಿ ಶೋಧ ನಡೆಸಿತ್ತು. ಈ ಬಗ್ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿದೆ. ಈ ನಡುವೆ ಶ್ರೀನಾಥ್ ಮಹದೇವನ್ ಅವರು ನಿರೀಕ್ಷಣಾ ಜಾಮೀನಿಗೆ ಮುಂದಾಗಿದ್ದಾರೆ.
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳ ವಿರುದ್ಧವೇ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಶೀಘ್ರದಲ್ಲಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸರಕಾರ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ.





