ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ಸೇರಿ ಹಲವರ ವಿರುದ್ಧ ದೂರು

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಹಲವರ ವಿರುದ್ಧ ಇಲ್ಲಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎಂಬುವರು ನೀಡಿದ ದೂರಿನನ್ವಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ, ಕೆಎಸ್ಸಿಎ, ಆರ್ಸಿಬಿ, ಅಮಾನತುಗೊಂಡ ಪೊಲೀಸ್ ಅಧಿಕಾರಿಗಳಾದ ವಿಕಾಸ್ ಕುಮಾರ್, ಶೇಖರ್ ತೆಕ್ಕಣನವರ್, ವಿಧಾನಸೌಧ ಡಿಸಿಪಿ ಕರಿಬಸನಗೌಡ ಸೇರಿ ಹಲವರ ವಿರುದ್ಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೂರಿನ ವಿವರ: ಜೂ.4ರಂದು ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಸಾವುಗಳಿಗೆ ಸರಕಾರ ಉತ್ತರವನ್ನು ಕೊಡಬೇಕು ಎಂದು ಟಿ.ಜೆ.ಅಬ್ರಹಾಂ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೆಎಸ್ಸಿಎ ಮತ್ತು ಆರ್ಸಿಬಿ ಆಡಳಿತಾಧಿಕಾರಿಗಳು ಯಾವುದೇ ಪೂರ್ವ ಯೋಜನೆಯಿಲ್ಲದೆ ಕಾರ್ಯಕ್ರಮ ನಡೆಸಿದ್ದಾರೆ. ಕಾರ್ಯಕ್ರಮವನ್ನು ಎರಡು ದಿನ ಮುಂದೂಡಬಹುದಿತ್ತು. ಈ ದುರಂತಕ್ಕೆ ಕಾರಣರಾದವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಿದ್ದೇಕೆ? ಹಾಗಿದ್ದರೆ, ಮೊದಲೇ ಆರ್ ಸಿಬಿ ಗೆಲ್ಲುವ ಬಗ್ಗೆ ಕೆಎಸ್ಸಿಎ ಹಾಗೂ ಆರ್ ಸಿಬಿ ಆಡಳಿತ ಮಂಡಳಿಗೆ ಮಾಹಿತಿ ಇತ್ತಾ? ಅಥವಾ ಮ್ಯಾಚ್ ಫಿಕ್ಸಿಂಗ್ ಆಗಿತ್ತಾ? ಈ ಬಗ್ಗೆ ಅನುಮಾನವಿದೆ. ಈ ಬಗ್ಗೆಯೂ ಬಿಸಿಸಿಐಗೆ ಮುಂದಿನ ದಿನಗಳಲ್ಲಿ ದೂರು ಕೊಡುತ್ತೇನೆ ಎಂದು ಟಿ.ಜೆ.ಅಬ್ರಹಾಂ ತಿಳಿಸಿದ್ದಾರೆ.







