ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಸಂವಿಧಾನಕ್ಕೆ ಮಾಡಿದ ಅಪಚಾರ: ಆರ್.ಅಶೋಕ್

ಬೆಂಗಳೂರು : ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್ ಸರಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ಪ್ರಕಾರ ಧರ್ಮಾಧಾರಿತವಾದ ಮೀಸಲು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಹಿಡಿದುಕೊಂಡು ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲು ಹೆಚ್ಚಿಸಿರುವುದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಮತಕ್ಕಾಗಿ ಇಂತಹ ನೀಚ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಆರ್‍ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ದುರಂತವನ್ನು ಮುಚ್ಚಿಹಾಕಲು ಇಂತಹ ವಿವಾದವನ್ನು ಹರಿಬಿಡಲಾಗುತ್ತಿದೆ. ಇದು ನಾಡಿನ ಜನರ ಹಕ್ಕನ್ನು ಸರಕಾರ ಕಸಿದಿದೆ. ಹೀಗೆಯೇ ಮುಂದುವರಿದರೆ ಸಿದ್ದರಾಮಯ್ಯ ಕೇವಲ ಮುಸ್ಲಿಮ್ ಸಮುದಾಯಕ್ಕೆ ಮೀಸಲಾದ ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರು ಟೀಕಿಸಿದರು.





