ಸಾಂಪ್ರದಾಯಿಕ ನೇಕಾರಿಕೆಗೆ ಸರಕಾರದ ಉತ್ತೇಜನ : ಸಚಿವ ಶಿವಾನಂದ ಪಾಟೀಲ್
‘ಕೊಡು-ಕೊಳ್ಳುವವರ ಸಮಾವೇಶ'

ಬೆಂಗಳೂರು : ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪಾರಂಪರಿಕ ಉದ್ಯೋಗವನ್ನೂ ಉಳಿಸಿ-ಬೆಳೆಸುವ ಅಗತ್ಯವಿದ್ದು, ಸಾಂಪ್ರದಾಯಿಕ ನೇಕಾರಿಕೆಗೆ ಸರಕಾರ ಉತ್ತೇಜನ ನೀಡಲಿದೆ ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಶುಕ್ರವಾರ ನಗರದ ಚರ್ಚ್ ಸ್ಟ್ರೀಟ್‍ನಲ್ಲಿರುವ ಸಮಗತಾ ಸಭಾಂಗಣದಲ್ಲಿ ಚರಕ ಮತ್ತು ದೇಸಿ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿರುವ ಎರಡು ದಿನಗಳ ‘ಕೊಡು-ಕೊಳ್ಳುವವರ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಔದ್ಯೋಗಿಕ ಬೆಳವಣಿಕೆ ಮತ್ತು ವೈಜ್ಞಾನಿಕ ಬೆಳವಣಿಗೆ ಮುಖ್ಯವಾದರೂ ಪ್ರಕೃತಿ ಸಂರಕ್ಷಣೆಯೊಂದಿಗೆ ಈ ಚಟುವಟಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಹೆಗ್ಗೋಡಿನ ಚರಕ ಸಂಸ್ಥೆ ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದು, ಈ ಸಂಸ್ಥೆಗೆ ಸರಕಾರ ಅಗತ್ಯ ನೆರವು ಸಹಕಾರ ನೀಡಲು ಬದ್ಧವಿದೆ ಎಂದು ಅವರು ಹೇಳಿದರು.
ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮ ಎರಡನ್ನೂ ವಿಲೀನಗೊಳಿಸಿ ಏಕ ನಿಗಮ ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆ. ನೇಕಾರ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಎರಡು ನಿಗಮಗಳಿಂದ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿರುವುದು ಮನಗಂಡು ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಕೈಮಗ್ಗದ ಬಟ್ಟೆಗಳನ್ನು ಸರಕಾರದ ಇಲಾಖೆಗಳು ಖರೀದಿಸಬೇಕೆಂಬ ನಿಯಮ ಇದೆ. ಆದರೆ, ಕೆಲವು ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಇದಕ್ಕೆ ಚಾಲನೆ ಸಿಕ್ಕಿಲ್ಲ. ಈ ಹಿಂದೆ ನರ್ಬಾಡ್ ನೇಕಾರ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡುತ್ತಿತ್ತು. ಈಗ ಅದು ಕಡೆಗಣಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಬಾರ್ಡ್ ಕೂಡ ವಾಣಿಜ್ಯ ಬ್ಯಾಂಕುಗಳ ಸ್ವರೂಪ ಪಡೆದುಕೊಳ್ಳತೊಡಗಿದೆ. ಕೃಷಿಗೆ ನೀಡುತ್ತಿದ್ದ ನೆರವಿನ ಪ್ರಮಾಣವನ್ನೂ ಕಡಿಮೆ ಮಾಡಿದ್ದು, ಇದು ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದ ಶಿವಾನಂದ ಪಾಟೀಲ್, ಭವಿಷ್ಯದಲ್ಲಿ ನರ್ಬಾಡ್ ಮೂಲಕ ನೇಕಾರರಿಗೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತೆ ಕೆ.ಜ್ಯೋತಿ ಮಾತನಾಡಿ, ಸರಕಾರ 'ಮಹಾತ್ಮ ಗಾಂಧಿ ವಸ್ತ್ರೋದ್ಯಮ' ಯೋಜನೆ ರೂಪಿಸಿದ್ದು, ಇದರಲ್ಲಿ ಕೈಮಗ್ಗ ನೇಕಾರರನ್ನೇ ಷೇರುದಾರರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಸರಕಾರ ಎರಡು ವರ್ಷದ ಹಿಂದೆ ಈ ಯೋಜನೆಯನ್ನು ಘೋಷಿಸಿತ್ತು. ಆದರೆ, ಅದಕ್ಕೆ ಚಾಲನೆ ಸಿಕ್ಕಿರಲಿಲ್ಲ. ಈಗ ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ' ಕೋಶ ಎಂಬ ಲಿಮಿಟೆಡ್ ಕಂಪನಿ ಆರಂಭಿಸಲಾಗುತ್ತಿದೆ ಎಂದರು.
ಈ ಹಿಂದೆ ಹತ್ತಿ, ರೇಶ್ಮೆ, ಉಣ್ಣೆ ಕೈಮಗ್ಗ ನೇಕಾರರು ರಾಜ್ಯದಲ್ಲಿ 40 ಸಾವಿರ ಜನ ಇದ್ದರು. ಈಗ 20 ಸಾವಿರಕ್ಕೆ ಬಂದಿದೆ. ಈಗ ಮತ್ತೊಮ್ಮೆ ಕೈಮಗ್ಗ ನೇಕಾರರ ಸರ್ವೇ ನಡೆಸಲಾಗುವುದು ಎಂದು ಜ್ಯೋತಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ, ಸರಕಾರ ಕೈಮಗ್ಗ ನೇಕಾರರ ಅನುಕೂಲಕ್ಕಾಗಿ ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ' ಜಾರಿಗೆ ಮುಂದಾಗಿದೆ. ಇದು ಕೈಮಗ್ಗ ನೇಕಾರರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದರು.
ಭಾರತವು ಹತ್ತಿ ಕೈಮಗ್ಗದಲ್ಲಿ ಅತ್ಯಂತ ಪ್ರಖ್ಯಾತಿ ಹೊಂದಿದ್ದು, ಬ್ರಿಟಿಷರ ಕಾಲದಲ್ಲೇ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ಸಾಂಪ್ರದಾಯಿಕ ನೇಕಾರಿಕೆ ಸಂಕಷ್ಟದಲ್ಲಿದೆ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಚರಕ ಸಂಸ್ಥೆ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ನರ್ಬಾಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಮಾತನಾಡಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ನಿವೃತ್ತ ಆಯುಕ್ತ ಬಿ.ಎಫ್.ಪಾಟೀಲ್, ನೇಕಾರ ಸೇವಾ ಕೇಂದ್ರದ ಮುಖ್ಯಸ್ಥ ಪ್ರಭಾಕರ್, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ, ಡಿಕನಿ ಡೈರಿಯ ಗೋಪಿ, ದೇಸಿ ಟ್ರಸ್ಟ್‍ನ ಶಾರದಾ ಮತ್ತಿತರರು ಉಪಸ್ಥಿತರಿದ್ದರು. ಪದ್ಮಶ್ರೀ ನಿರೂಪಿಸಿದರು.







