ಬೆಂಗಳೂರು | ಪೆರೋಲ್ ಮೇಲೆ ಹೊರಬಂದು ಪರಾರಿಯಾಗಿದ್ದ ಸಜಾಬಂಧಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ತಾಯಿಗೆ ಅನಾರೋಗ್ಯದ ಕಾರಣಕ್ಕೆ ತುರ್ತು ಪೆರೋಲ್ ರಜೆ ಪಡೆದು ಅವಧಿ ಮುಗಿದ ಬಳಿಕ ಜೈಲಿಗೆ ಹೋಗದೇ ತಲೆಮರೆಸಿಕೊಂಡಿದ್ದ ಸಜಾ ಬಂಧಿಯನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಂಧಿಸಿರುವುದಾಗಿ ಇಲ್ಲಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಇದ್ರಿಸ್(30) ಬಂಧಿತ ಕೈದಿ ಎಂದು ಗುರುತಿಸಲಾಗಿದೆ. ಬೊಮ್ಮನಹಳ್ಳಿ ಸಿಂಗಸಂದ್ರ ನಿವಾಸಿಯಾಗಿರುವ ಕೈದಿಯು ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಕಾರಣ ನೀಡಿ ಎ.18ರಿಂದ ಮೇ 17ರವರೆಗೆ 30 ದಿನಗಳ ಕಾಲ ಪೆರೋಲ್ ರಜೆ ಪಡೆದು ಹೊರಬಂದಿದ್ದ. ರಜೆ ಅವಧಿ ಮುಗಿದ ಬಳಿಕ ನೇರವಾಗಿ ಜೈಲಿಗೆ ಬರದೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಜೈಲಾಧಿಕಾರಿಗಳು ನೀಡಿದ ದೂರಿನನ್ವಯ ಮೊಹಮ್ಮದ್ ಇದ್ರಿಸ್ನನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಮೂಲತಃ ಕೃಷ್ಣಗಿರಿ ಜಿಲ್ಲೆಯವನಾದ ಮೊಹಮ್ಮದ್ ಇದ್ರಿಸ್, ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಅಪರಾಧ ಕೃತ್ಯ ಸಾಬೀತಾಗಿದ್ದರಿಂದ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ಪ್ರತ್ಯೇಕ ಐದು ಪ್ರಕರಣಗಳಲ್ಲಿ ಒಟ್ಟು 40 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿತ್ತು. ಶಿಕ್ಷಾ ಅವಧಿ ಪೂರ್ಣಗೊಂಡರೂ ದಂಡ ಪಾವತಿಸದ ಕಾರಣ ಜೈಲಿನಲ್ಲಿ ಉಳಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.





