ಬಿ.ಆರ್.ಪಾಟೀಲ್ ದೂರು ನೀಡಿದರೆ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಚಾರ ಆರೋಪಕ್ಕೆ ಸಂಬಂಧಿಸಿದಂತೆ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಈ ವಿಚಾರ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
"ಬಿ.ಆರ್.ಪಾಟೀಲ್ ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಯಾರು ಮನೆಗಳನ್ನು ಮಂಜೂರು ಮಾಡಲು ಲಂಚ ಕೇಳುತ್ತಿದ್ದಾರೋ ಅವರ ವಿರುದ್ಧ ವಸತಿ ಸಚಿವ ಝಮೀರ್ ಅಹ್ಮದ್ ಅವರಿಗೆ ಬಿ.ಆರ್.ಪಾಟೀಲ್ ದೂರು ನೀಡಿದರೆ, ಅವರು ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಏನಿದು ಘಟನೆ :
"ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ" ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಆಳಂದ ಶಾಸಕ ಬಿ.ಆರ್.ಪಾಟೀಲ್, ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು.
ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ಎನ್ನಲಾದವರ ಜೊತೆ ಮೊಬೈಲ್ ನಲ್ಲಿ ಹಿಂದಿ ಬಾಷೆಯಲ್ಲಿ ಸಂಭಾಷಣೆ ನಡೆಸಿದ್ದರು. ʼದುಡ್ಡು ಕೊಟ್ಟು ಮನೆಗಳನ್ನು ಹಂಚಲಾಗುತ್ತಿದೆ, ಇದೇನು ದಂಧೆ ನಡೆಯುತ್ತಿದೆಯೋ, ನನ್ನ ಪಕ್ಷ ಮತ್ತು ನಮ್ಮ ಸರಕಾರದ ವಿರುದ್ಧವೇ ಹೇಗೆ ಆರೋಪ ಮಾಡಲಿ? ಒಂದು ವೇಳೆ ನಾನು ಹೊರಗೆ ಬಾಯಿ ಬಿಟ್ಟರೆ ಸರಕಾರವೇ ನಡಗುತ್ತದೆʼ ಎಂದು ಬಿ.ಆರ್.ಪಾಟೀಲ್ ಎನ್ನಲಾದವರು ಅಸಮಾಧಾನ ವ್ಯಕ್ತಪಡಿಸಿದ್ದರು.







