ಸ್ಕೌಟ್ಸ್ ಮತ್ತು ಗೈಡ್ಸ್‍ಗೆ ವಿಶೇಷ ಪ್ರೋತ್ಸಾಹ ನೀಡಲು ಕ್ರಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸ್ಕೌಟ್ಸ್-ಗೈಡ್ಸ್/ ರೋವರ್ಸ್-ರೇಂಜರ್ಸ್‍ಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಸಲುವಾಗಿ ಪಾರಿತೋಷಕ ಪದಕ ನೀಡುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣದ ಕೋರ್ಸ್‍ಗಳಲ್ಲಿ ಪ್ರವೇಶಕ್ಕಾಗಿ ಸ್ಕೌಟ್ಸ್-ಗೈಡ್ಸ್/ ರೋವರ್ಸ್-ರೇಂಜಸ್‍ಗಳಿಗೆ ಮೀಸಲಿರಿಸಿರುವ ಸೀಟುಗಳನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ಮತ್ತಿತರರು ಉಪಸ್ಥಿತರಿದ್ದರು.





