ಆರೋಗ್ಯ ಕ್ಷೇತ್ರದಲ್ಲಿ ಪರಿವರ್ತನೆ ತಂದ ಕೇಂದ್ರ ಸರಕಾರ: ಕೇಂದ್ರ ಸಚಿವ ಅಮಿತ್ ಶಾ

ಬೆಂಗಳೂರು : ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ಕೇವಲ 11 ವರ್ಷಗಳಲ್ಲಿಯೇ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ನಗರೂರಿಲ್ಲಿ ಆದಿಚುಚನಗಿರಿ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ 60 ಕೋಟಿ ಜನರಿಗೆ ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ದೊರೆಯುತ್ತಿದೆ. ಹಾಗೆಯೇ ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.
2014ಕ್ಕೂ ಮುನ್ನ ದೇಶದಲ್ಲಿ 7 ಏಮ್ಸ್ ಗಳಿದ್ದವು. ಇದೀಗ ಅವುಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 780ಕ್ಕೆ, ವೈದ್ಯಕೀಯ ಸೀಟುಗಳ ಸಂಖ್ಯೆ 51 ಸಾವಿರದಿಂದ 1.18 ಲಕ್ಷ, ಪಿಜಿ ಸೀಟುಗಳು 31 ಸಾವಿರದಿಂದ 74 ಸಾವಿರಕ್ಕೆ ಏರಿಕೆಯಾಗಿದೆ. ಈ ಕ್ರಮಗಳಿಂದ ದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಪ್ರಮಾಣ ವೃದ್ದಿಸಿದೆ ಎಂದು ಅವರು ಹೇಳಿದರು.
ಆದಿಚುಂಚನಗಿರಿ ಮಠಕ್ಕೆ 1800 ವರ್ಷಗಳ ಹಿನ್ನೆಲೆಯಿದ್ದು, ಈ ಭವ್ಯ ಪರಂಪರೆಯನ್ನು ಡಾ. ನಿರ್ಮಲನಾನಂದನಾಥ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸೇವೆ, ಶಿಕ್ಷಣ, ಸಮರ್ಪಣೆಯಂತಹ ಉನ್ನತ ಮೌಲ್ಯಗಳನ್ನು ಪರಿಪಾಲಿಸುತ್ತಿದ್ದಾರೆ. ಬಡವರಿಗೆ ಉಚಿತ ಚಿಕಿತ್ಸೆ, ಅನ್ನ, ಶಿಕ್ಷಣ, ಆರೋಗ್ಯ, ರಕ್ಷಣೆ, ಆಧ್ಯಾತ್ಮಿಕ, ಅರಣ್ಯ, ಅನುಕಂಪ, ಅನುಬಂಧ ಸೇರಿ 9 ಆಧಾರ ಸ್ತಂಭಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಮಹೋನ್ನತ ಸ್ಥಾನ ತಂದುಕೊಟ್ಟ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸಲೇಬೇಕು. ಅವರು 40 ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳನ್ನು ನಿರ್ಮಿಸಿದ್ದು, ಅನಾಥಾಲಯ, ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದಾರೆ. ಈ ಪರಂಪರೆ ಮುಂದುವರೆಯಲಿ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ನ್ಯಾಕ್ ಪ್ಲಸ್ ಮಾನ್ಯತೆ ದೊರೆತಿರುವುದು ಇಲ್ಲಿನ ಶಿಕ್ಷಣ ಗುಣಮಟ್ಟಕ್ಕೆ ಸೂಕ್ತ ನಿದರ್ಶನವಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಹಲವಾರು ಸಮಸ್ಯೆಗಳನ್ನು ನಾವು ಒಂದೊಂದಾಗಿ ಬಗೆಹರಿಸುತ್ತೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸರಕಾರಿ ವೈದ್ಯಕೀಯ ಕಾಲೇಜು, ಅಪಘಾತ ಮತ್ತು ಕ್ಯಾನ್ಸರ್ ಆಸ್ಪತ್ರೆಗಳನ್ನು ಆರಂಭಿಸುವುದು ನಮ್ಮ ಗುರಿಯಾಗಿದೆ. ರಾಜ್ಯದಲ್ಲಿ ಶರಣ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠ, ಮಂದಿರಗಳು ಅನ್ನ, ಅಕ್ಷರ ದಾಸೋಹದ ಮೂಲಕ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ, ನಮ್ಮ ಪೀಠದ ಶ್ರೇಯೋಬಿವೃದ್ಧಿಗಾಗಿ ಆದಿಚುಂಚನಗಿರಿ ಮಠದ ಕೊಡುಗೆ ಅನನ್ಯ. ನಮ್ಮ ಗುರುಪೀಠವನ್ನು ಶಾಖಮಠದಂತೆ ಪೋಷಿಸಿ ಬೆಳೆಸುತ್ತಿದ್ದು, ಇದಕ್ಕಾಗಿ ನಾವು ಸದಾ ಕಾಲ ಋಣಿಯಾಗಿರುತ್ತೇವೆ. ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುತ್ತೇವೆ. ಮಾದಿಗ ಸಮುದಾಯಕ್ಕೆ ಕೇಂದ್ರ ಸರಕಾರ ಮೀಸಲಾತಿ ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ, ರಾಜ್‍ಕೋಠ್‍ನ ಅರ್ಶ ವಿದ್ಯಾ ಮಂದಿರದ ಪರಮಾತ್ಮಾನಂದ ಸ್ವಾಮೀಜಿ, ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಡಾ.ಕೆ.ಸುಧಾಕರ್, ಶಾಸಕ ಎಸ್.ಆರ್.ವಿಶ್ವನಾಥ್, ಎನ್.ಶ್ರೀನಿವಾಸ್, ಟ್ರಸ್ಟಿ ಡಿ. ದೇವರಾಜು, ಉಪಕುಲಪತಿ ಡಾ.ಎಂ.ಎ.ಶಂಕರ್, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪ್ರಾಂಶುಪಾಲ ಡಾ.ಕೆ.ಎಸ್.ಗಂಗಾಧರ, ಆಸ್ಪತ್ರೆಯ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ವಿ.ಆರ್. ಮತ್ತಿತರರು ಉಪಸ್ಥಿತರಿದ್ದರು.







