ಬೆಂಗಳೂರು | ವಿದ್ಯುತ್ ಪ್ರವಹಿಸಿ ಬಾಲಕ ಸಾವು ಪ್ರಕರಣ: ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೈಟೆನ್ಷನ್ ವಿದ್ಯುತ್ ಪ್ರವಹಿಸಿ 10 ವರ್ಷದ ಬಾಲಕ ಮೃತಪಟ್ಟ ಘಟನೆ ಸಂಬಂಧ ಇಲ್ಲಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೃತ ಬಾಲಕ ಅನಂತ್ನ ತಾಯಿ ತುಲಾದೇವಿ ನೀಡಿರುವ ದೂರಿನನ್ವಯ ಮನೆ ಮಾಲಕ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂ ಇಂಜಿನಿಯರ್ಗಳು, ಬಿಬಿಎಂಪಿಯ ಸಹಾಯಕ ಇಂಜಿನಿಯರ್ಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಧಿಕೃತವಾಗಿ, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿರುವ ಮನೆ ಮಾಲಕ ಬಾಲರಾಜ್, ಹೈಟೆನ್ಷನ್ ತಂತಿಗಳಿಗೆ ಕವರಿಂಗ್ ಅಳವಡಿಸದ ಕೆಪಿಟಿಸಿಎಲ್, ಬೆಸ್ಕಾಂ ಇಂಜಿನಿಯರ್ಗಳು ಹಾಗೂ ಬಿಬಿಎಂಪಿಯ ಸಹಾಯಕ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ ಎಂದು ತುಲಾದೇವಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯ ವಿವರ: ಜೂ.15ರಂದು ಕೆ.ಆರ್.ಪುರಂನ ಸ್ವಾತಂತ್ರ್ಯ ನಗರದಲ್ಲಿ ಹೈಟೆನ್ಷನ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ನೇಪಾಳ ಮೂಲದ ಬಾಲಕ ಅನಂತ್ ತೀವ್ರವಾಗಿ ಗಾಯಗೊಂಡಿದ್ದ. ಘಟನೆಯಲ್ಲಿ ಬಾಲಕನ ಕೈ, ಕಾಲು ಮತ್ತು ದೇಹದ ಕೆಲವು ಭಾಗಗಳಲ್ಲಿ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ಮಧ್ಯಾಹ್ನ ಬಾಲಕ ಮೃತಪಟ್ಟಿದ್ದನು.





