ಸಚಿವ ಝಮೀರ್ ಅಹ್ಮದ್ ರಾಜೀನಾಮೆ ಪಡೆದುಕೊಳ್ಳಿ: ಬಿಜೆಪಿ

ಬೆಂಗಳೂರು,: ವಸತಿ ಇಲಾಖೆ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಸಚಿವ ಝಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲಿ ಸಾಲು-ಸಾಲು ಭ್ರಷ್ಟಾಚಾರಗಳು ನಡೆಯುತ್ತಿವೆ ಎನ್ನುವುದಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿರುವ ಮಂತ್ರಿಗಳು ಮತ್ತು ಶಾಸಕರೇ ಬೇಸತ್ತು ಪತ್ರ-ಆಡಿಯೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಶಾಸಕ ಬಿ.ಆರ್.ಪಾಟೀಲ್ ವಸತಿ ಇಲಾಖೆ ಮನೆಗಳನ್ನು ಮಂಜೂರು ಮಾಡುತ್ತಿಲ್ಲ. ನಾನು ಬರೆದ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷನೇ ಹಣ ತೆಗೆದುಕೊಂಡು ಹೋದರೆ ಮಾತ್ರ ಮನೆಗಳು ಮಂಜೂರು ಆಗುತ್ತಿದೆ. ಈ ಸರಕಾರದಲ್ಲಿ ನನ್ನ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. 950 ಮನೆಗಳು ಆಳಂದ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಾನು ಪತ್ರವನ್ನು ಬರೆದಾಗ ಮನೆಗಳನ್ನು ಕೊಟ್ಟಿಲ್ಲ. ನನ್ನದೇ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ತೆಗೆದುಕೊಂಡು ಹೋಗಿ ವಸತಿ ಇಲಾಖೆಗೆ ನೀಡಿದ್ದು, ನಂತರ ದುಡ್ಡು ಪಡೆದು ಮನೆಗಳನ್ನು ಮಂಜೂರು ಮಾಡಿದ್ದಾರೆಂದು ಹೇಳಿದ್ದಾರೆ. ಎಲ್ಲಿದೆ ಸಾಕ್ಷಿ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದರು. ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಅವರು ಪ್ರಶ್ನಿಸಿದರು.
ಲೋಕಾಯುಕ್ತದಲ್ಲೇ ಭ್ರಷ್ಟಾಚಾರ: ಈ ಹಿಂದೆ ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಅವರನ್ನು ಪೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯನವರೇ, ಇದೀಗ ನಿಮ್ಮ ಸರಕಾರದಲ್ಲಿ ಏನು ನಡೆಯುತ್ತಿದೆ? ಎಂದು ಕೇಳಿದ ರವಿಕುಮಾರ್, ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ, ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡುವುದಾಗಿ ಹೆದರಿಸಿ, ಕೋಟಿಗಟ್ಟಲೆ ಹಣ ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.







