ಹೊಸ ತಂತ್ರಜ್ಞಾನದ ಮೂಲಕ ದುರ್ವಾಸನೆ ಮುಕ್ತ ಕಸ ವಿಲೇವಾರಿ: ಡಿ.ಕೆ.ಶಿವಕುಮಾರ್

ಬೆಂಗಳೂರು : ಇನ್ನೂ ಮುಂದೆ 10 ಎಕರೆ ಜಾಗದ ಒಳಗೆ ಎಲ್ಲ್ಲ ಕಸವನ್ನು ವಿಲೇವಾರಿ ಮಾಡಲು ನೂತನ ಮಾದರಿಯಲ್ಲಿ, ಯಾವುದೇ ರೀತಿಯ ದುರ್ವಾಸನೆ ಬಾರದಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ದೊಡ್ಡಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಕಸ ಸಮಸ್ಯೆಯನ್ನು ನಿವಾರಣೆ ಮಾಡಲಾಗುವುದು. ಕಸ ವಿಲೇವಾರಿಗೆ ಸಂಬಂಧಿಸಿದಂತೆ ದಿಲ್ಲಿ, ಚೆನ್ನೈ, ಹೈದರಾಬಾದ್‍ನಲ್ಲಿ ಅಧ್ಯಯನ ಮಾಡಿದ್ದೇವೆ. ಹೊಸ ಮಾದರಿಯಲ್ಲಿ ಒಂದು ದಿನದಲ್ಲಿ ಬಂದ ಕಸವನ್ನು ಮೂರು ದಿನಗಳಲ್ಲಿ ಖಾಲಿ ಮಾಡುವಂತೆ ಸುಡಲಾಗುವುದು. ಈಗಿನಂತೆ ಕಸವನ್ನು ತಂದು ಸುರಿಯುವುದಿಲ್ಲ. ಈ ಕಸದಿಂದ ವಿದ್ಯುತ್ ಹಾಗೂ ಅನಿಲ ಉತ್ಪಾದನೆ ಮಾಡಲಾಗುವುದು ಎಂದರು.
ಬೆಂಗಳೂರು ನಗರ ಸೇರಿದಂತೆ ಗುಡ್ಡಗಳ ಪಕ್ಕ ಖಾಸಗಿ ಜಮೀನು ಕೊಟ್ಟರೆ, ಅದನ್ನು ಖರೀದಿ ಮಾಡಿ ಕಸ ವಿಲೇವಾರಿ ಮಾಡಲಾಗುವುದು. ಬೆಂಗಳೂರು ನಗರದಲ್ಲೇ ಇದರ ಮೊದಲ ಪ್ರಯೋಗ ಮಾಡುತ್ತೇವೆ. ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ ನಗರದಲ್ಲಿ ಬಂದರೆ, ಆಗ ಈ ಕಸ ವಿಲೇವಾರಿ ಕೇಂದ್ರಗಳಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಇನ್ನು ಮಳೆ ಬಂದಾಗ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.





