ತಂಬಾಕು ಮುಕ್ತ ಸಮಾಜ ನಿರ್ಮಿಸುವಲ್ಲಿ ಸಾರ್ವಜನಿಕರ ಪಾತ್ರ ನಿರ್ಣಾಯಕ : ದಿನೇಶ್ ಗುಂಡೂರಾವ್
ವಿಶ್ವ ಆರೋಗ್ಯ ಸಂಸ್ಥೆಯ ‘ಆಗ್ನೇಯ ಏಷ್ಯಾ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ

ಬೆಂಗಳೂರು : ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಸಾರ್ವಜನಿಕರು ಮತ್ತು ಸರಕಾರದ ಪಾತ್ರ ನಿರ್ಣಾಯಕವಾಗಿದ್ದು, ತಂಬಾಕು ಮುಕ್ತಗೊಳಿಸಿ, ನಮ್ಮ ಯುವಕರ ಆರೋಗ್ಯವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಶನಿವಾರ ಇಲ್ಲಿನ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ‘ಆಗ್ನೇಯ ಏಷ್ಯಾ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹುಕ್ಕಾ ಬಾರ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆ, ಧೂಮಪಾನ ಮತ್ತು ತಂಬಾಕು ಉಗುಳುವುದನ್ನು ನಿಷೇಧಿಸಲಾಗಿದೆ ಎಂದರು.
ವಿಶ್ವ ತಂಬಾಕು ರಹಿತ ದಿನಾಚರಣೆ ಸಂದರ್ಭದಲ್ಲಿ, ತಂಬಾಕು ನಿಯಂತ್ರಣಕ್ಕೆ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಕೋಶವು ಕೈಗೊಂಡ ಕ್ರಮಗಳನ್ನು ಪರಿಗಣಿಸಿ, ವಿಶ್ವ ಆರೋಗ್ಯ ಸಂಸ್ಥೆಯು ‘ಆಗ್ನೇಯ ಏಷ್ಯಾ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ’ಯನ್ನು ನೀಡಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ. ಯುಟಾರೊ ಸೆಟೋಯಾ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಯಂತ್ರಣದಲ್ಲಿ ಗಮನಾರ್ಹ ಕೊಡುಗೆ ನೀಡಿದ ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತದೆ. ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯು ಈ ಬಾರಿ 2025ರ ಆಗ್ನೇಯ ಏಷ್ಯಾ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ ಪಡೆದಿರುವುದು ಅಧಿಕಾರಿಗಳ ಉತ್ಸಾಹಭರಿತ ಕಾರ್ಯಕ್ಕೆ ಸಾಕ್ಷಿಯಾಗಿದೆ. ಇದು ತಂಬಾಕು ನಿಯಂತ್ರಣದಲ್ಲಿ ಕರ್ನಾಟಕದ ಪ್ರಯತ್ನಗಳಿಗೆ ನೀಡಿದ ನೇರ ಪ್ರಶಂಸೆಯಾಗಿದೆ ಎಂದರು.
ಇದೇ ವೇಳೆ 2025ರ ಆಗ್ನೇಯ ಏಷ್ಯಾ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ. ಯುಟಾರೊ ಸೆಟೋಯಾ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ಕೆ.ಬಿ., ನಿಮಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.







