ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ವಿರೋಧ | ಬಿಜೆಪಿಯಿಂದ ದ್ವೇಷ ರಾಜಕಾರಣ: ತಾಹೇರ್ ಹುಸೇನ್

ತಾಹೇರ್ ಹುಸೇನ್
ಬೆಂಗಳೂರು : ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿರುವುದು ಕೇಂದ್ರ ಸರಕಾರದ ಆದೇಶವಾಗಿದ್ದು, ಇದನ್ನು ರಾಜ್ಯ ಬಿಜೆಪಿ ವಿರೋಧಿಸುತ್ತಿರುವುದು ದ್ವೇಷ ರಾಜಕೀಯವಾಗಿದೆ. ಇದು ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸದಾಕಾಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದರಲ್ಲಿ ನಿಸ್ಸಿಮರು. ಅಲ್ಪಸಂಖ್ಯಾತರಿಗೆ ಮನೆ ನೀಡುವಾಗ ಮೀಸಲಾತಿ ನೀಡಲು ಕೇಂದ್ರ ಸರಕಾರವು ಕಾನೂನು ರೂಪಿಸಿದೆ. ಆದರೆ ರಾಜ್ಯ ಸರಕಾರ ತುಷ್ಟಿಕರಣಕ್ಕಾಗಿ ಮುಸ್ಲಿಂ ಓಲೈಕೆಯಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಸದಾಕಾಲ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಅವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಅದಕ್ಕಾಗಿ ಪ್ರತಿ ವಿಚಾರದಲ್ಲೂ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಕೊಡುವಾಗ ಬಿಜೆಪಿಗೆ ಹೆದರಿ ನಿರ್ಧಾರಗಳು ಮಾಡಬಾರದು. ರಾಜ್ಯ ಕಾಂಗ್ರೆಸ್ ಸರಕಾರವು 2ಎ ಮೀಸಲಾತಿ ಹಾಗೂ ಗೋಹತ್ಯೆ ನಿಷೇಧ ಕಾನೂನು ಶೀಘ್ರವೇ ವಾಪಸ್ ಪಡೆದು ಶೋಷಿತ ಸಮುದಾಯಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.







