ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್: ಬಿ.ವೈ. ವಿಜಯೇಂದ್ರ ಆರೋಪ

ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್ಗಳನ್ನು ತೆರೆಯಲಾಗಿದೆ. ಸಚಿವಾಲಯದಿಂದ ಗ್ರಾಮ ಪಂಚಾಯತ್ ಕಚೇರಿ ವರೆಗೂ ಲಂಚ ಇಲ್ಲದೆ ಕೆಲಸ ಕಾರ್ಯಗಳು ನಡೆಯುವುದಕ್ಕೆ ಸಾಧ್ಯವಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರಕಾರ ಕಮಿಷನ್ ಮಾಫಿಯಗೆ ಬೆಂಬಲ ಕೊಡುತ್ತಿದೆ. ಕಮಿಷನ್ ಮಾಫಿಯ ಏಜೆಂಟರ ಮೂಲಕ ರಾಜ್ಯದಲ್ಲಿ ಇವರು ಸರಕಾರದ ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಿದ್ದರಾಮಯ್ಯ ಇದೆಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವ ಪರಮೇಶ್ವರ್ ಅವರು ಬಾದಾಮಿಯಲ್ಲಿ ಈಗಷ್ಟೇ ಹೇಳಿಕೆ ನೀಡಿ, ‘ಸಿದ್ರಾಮಣ್ಣ ಅವರ ಹತ್ರ ಕಾಸಿಲ್ಲ; ದಯವಿಟ್ಟು ಹಣ ಕೇಳಲು ಬರಬೇಡಿ’ ಎಂದಿದ್ದಾಗಿ ತಿಳಿಸಿದರು. ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಸಂದೇಶವನ್ನು ರಾಜ್ಯದ ಮುಖ್ಯಮಂತ್ರಿ ಗೃಹ ಸಚಿವರ ಮೂಲಕ ಕಾಂಗ್ರೆಸ್ ಶಾಸಕರಿಗೆ ತಿಳಿಸಿದಂತಿದೆ; ಶಾಸಕರು ಅನುದಾನ ಕೇಳಬೇಡಿ ಎಂದಿರುವಂತಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ದೇವರಾಜ ಅರಸು ಅವರ ದಾಖಲೆ ಮುರಿಯಬೇಕು. ಇವರು ದೇವರಾಜ ಅರಸು ಅವರ ದಾಖಲೆ ಮುರಿಯುವುದಕ್ಕೋಸ್ಕರ ರಾಜ್ಯವನ್ನು ಲೂಟಿ ಮಾಡಿ, ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದೇ, ಲಂಚ ಇಲ್ಲದೇ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲವೆಂದಾದರೆ ಈ ರಾಜ್ಯದಲ್ಲಿ ಮುಖ್ಯಮಂತ್ರಿ ತಮ್ಮ ಸಂಪೂರ್ಣ ಹಿಡಿತವನ್ನು ಕಳೆದುಕೊಂಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಲಂಚ ಸಂಗ್ರಹಕ್ಕೆ ಮುಖ್ಯಮಂತ್ರಿಯವರೇ ಔಟ್ಸೋರ್ಸ್ ನೀಡಿದ್ದಾರೆ. ಬಿ.ಆರ್.ಪಾಟೀಲರ ಆರೋಪದ ಬಳಿಕವೂ ಮುಖ್ಯಮಂತ್ರಿಗಳು ಝಮೀರ್ ಅಹ್ಮದ್ ಅವರ ರಾಜೀನಾಮೆ ಪಡೆದಿಲ್ಲ. ಆದರೆ, ಅದೇನೂ ದೊಡ್ಡ ವಿಚಾರವಲ್ಲ; ಭ್ರಷ್ಟಾಚಾರದ ಬಗ್ಗೆ ಸರಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇದು ಜವಾಬ್ದಾರಿಯುತ ಗೃಹ ಸಚಿವರ ಹೇಳಿಕೆಯೇ ಎಂದು ಪ್ರಶ್ನಿಸಿದರು.
ಹಗರಣ- ಅಧಿಕಾರಿಗಳು ಬಲಿಪಶು..
ಸ್ವತಃ ನಾಗೇಂದ್ರರ ರಾಜೀನಾಮೆಗೆ ಕಾರಣವಾದ 150-160 ಕೋಟಿಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮಾಡಿತ್ತು. ತೆಲಂಗಾಣಕ್ಕೆ ಹಣ ಕಳಿಸಲಾಗಿತ್ತು. ಇವರು ಲೂಟಿ ಮಾಡಲು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು; ಅವರು ಬಲಿಪಶು ಆಗಿದ್ದರು ಎಂದು ವಿಜಯೇಂದ್ರ ವಿವರಿಸಿದರು.
ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳೇ ಆರೋಪಿ ಸ್ಥಾನದಲ್ಲಿದ್ದರು. ಹಗರಣ ಆಗಿಲ್ಲವೆಂದು ಹೇಳಿದ್ದ ಸಿದ್ದರಾಮಯ್ಯನವರು 14 ನಿವೇಶನ ಹಿಂದಿರುಗಿಸಿದ್ದರು ಎಂದು ತಿಳಿಸಿದರು. ಬಿಜೆಪಿ ಹೋರಾಟ, ಜನಾಕ್ರೋಶ ಯಾತ್ರೆ ಮಾಡಿದಾಗ ಸಿದ್ದರಾಮಯ್ಯ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ಬಹಳ ಹಗುರವಾಗಿ ಮಾತನಾಡಿದ್ದರು. ಬಿಜೆಪಿಯವರಿಗೆ ಕೆಲಸ ಇಲ್ಲ; ಗ್ಯಾರಂಟಿಗಳ ಜನಪ್ರಿಯತೆ ಸಹಿಸಲಾಗದೆ ಬೀದಿಗಿಳಿದು ಹೋರಾಟ ಎಂದು ಟೀಕಿಸಿದ್ದರು. ಸಿದ್ದರಾಮಯ್ಯನವರೇ ಬಿ.ಆರ್.ಪಾಟೀಲ್, ರಾಜು ಕಾಗೆ, ಗೋಪಾಲಕೃಷ್ಣ ಅವರ ಹೇಳಿಕೆಗೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸಿದರು. ರಾಜ್ಯದ ಜನರಿಗೆ ಸಿದ್ದರಾಮಯ್ಯನವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮತ್ತೊಬ್ಬ ಹಿರಿಯ ಶಾಸಕ ರಾಜು ಕಾಗೆ ಅವರು ಕಾಮಗಾರಿಗೆ ಕಾಸು ಕೊಟ್ಟು ವರ್ಕ್ ಆರ್ಡರ್ ಪಡೆಯಬೇಕಿದೆ. ಬಿ.ಆರ್.ಪಾಟೀಲ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಅವರಿಗೆ ಆದ ಸ್ಥಿತಿ ನನಗೂ ಆಗಿದೆ. ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಕೂಡ ಕಮಿಷನ್- ಲಂಚ ಕೊಡದೆ ವರ್ಕ್ ಆರ್ಡರ್ ಸಿಗುತ್ತಿಲ್ಲ ಎಂದಿರುವುದಾಗಿ ಗಮನಕ್ಕೆ ತಂದರು. ಇದು ಮೊದಲ ಬಾರಿ ಅಲ್ಲ; ಹಿಂದೆಯೂ ಮುಖ್ಯಮಂತ್ರಿಗಳ ವಿರುದ್ಧ ತಮ್ಮ ಅಸಂತೋಷ ತೋಡಿಕೊಂಡಿದ್ದರು ಎಂದು ಹೇಳಿದರು.
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಗೌಡ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಪ್ರಮುಖರು ಇದ್ದರು.