ಶಾಲಾ ಮಕ್ಕಳಿಗೆ ಷೂ, ಸಾಕ್ಸ್ ಸರಬರಾಜು ಮಾಡದಿರುವುದು ಶಿಕ್ಷಣ ಹಕ್ಕು ಕಾಯಿದೆಯ ಉಲ್ಲಂಘನೆ: ನಿರಂಜನಾರಾಧ್ಯ ವಿ.ಪಿ.

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿ ತಿಂಗಳು ಮುಗಿಯುತ್ತಿದ್ದರೂ, ಸರಕಾರಿ ಶಾಲಾ ಮಕ್ಕಳಿಗೆ ಷೂ ಮತ್ತು ಸಾಕ್ಸ್ ಸರಬರಾಜು ಆಗದಿರುವುದು ಶಿಕ್ಷಣ ಹಕ್ಕು ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಖಂಡಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಶಿಕ್ಷಣ ಹಕ್ಕು ಕಾಯಿದೆ ಕಾಯಿದೆಯು ಮಕ್ಕಳಿಗೆ ಕೇವಲ ಶಾಲೆಗೆ ಹಾಜರಾಗುವ ಹಕ್ಕನ್ನು ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಶಿಕ್ಷಣ ಹಾಗು ಸಕಾಲಿಕವಾಗಿ ಗುಣಮಟ್ಟದ ಪಠ್ಯಪೂರಕ ಸಾಮಗ್ರಿಗಳಾದ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಷೂ ಹಾಗು ಸಾಕ್ಸ್ ಒದಗಿಸುವ ಜವಾಬ್ದಾರಿ ಸರಕಾರ ಹೊಂದಿರುತ್ತದೆ ಎಂದಿದ್ದಾರೆ.
ಸರಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ಕೂಡಲೇ ಮಕ್ಕಳಿಗೆ ಷೂ ಮತ್ತು ಸಾಕ್ಸ್ ಒದಗಿಸಲು ಒಂದು ಕಾಲಮಿತಿಯನ್ನು ನಿಗದಿಗೊಳಿಸಿ, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು. ಶಾಲಾ ಮಕ್ಕಳಿಗೆ ಷೂ ಮತ್ತು ಸಾಕ್ಸ್ ಸರಬರಾಜು ಮಾಡುವ ಸಂಸ್ಥೆಗಳಿಂದ ಖರೀದಿಸಿದ ರಶೀದಿ ಮತ್ತು ಕನಿಷ್ಠ ಒಂದು ವರ್ಷದ ವಾರಂಟಿ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.





