ಸಾಹಿತಿಗಳಿಗೆ ಅಂತರ್ ಶಿಸ್ತೀಯ ತಿಳುವಳಿಕೆ ಅಗತ್ಯ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಪ್ರೊ. ಎಸ್.ಚಂದ್ರಶೇಖರ್ ಅವರಿಗೆ ಅಂತರ್ ಶಿಸ್ತೀಯ ತಿಳುವಳಿಕೆಯಿದೆ. ಸಾಹಿತಿಗಳಿಗೆ ಇತಿಹಾಸ, ರಾಜಕೀಯ ಸೇರಿ ಬೇರೆ ಬೇರೆ ಅಂತರ್ ಶಿಸ್ತೀಯ ವಿಷಯಗಳ ಬಗ್ಗೆ ತಿಳುವಳಿಕೆ ಇರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಪ್ರೊ. ಎಸ್.ಚಂದ್ರಶೇಖರ್-75’ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಇತಿಹಾಸ ರಚನೆಯಲ್ಲಿ ಸಮಚಿತ್ತತೆ ಮತ್ತು ನಿಖರತೆ ಬಹಳ ಮುಖ್ಯ. ಅದು ಎಲ್ಲ ಇತಿಹಾಸಕಾರರಿಗೂ ಇರಬೇಕು. ಸಮಚಿತ್ತತೆ ಮತ್ತು ನಿಖರತೆಯ ಕಾರಣಕ್ಕಾಗಿ ಪ್ರೊ.ಚಂದ್ರಶೇಖರ್ ಅವರು ಬಹಳ ಇಷ್ಟವಾಗುತ್ತಾರೆ ಎಂದು ತಿಳಿಸಿದರು.
ಪ್ರೊ. ಎಸ್.ಚಂದ್ರಶೇಖರ್ ಅವರು ಲಂಕೇಶ್ ಪತ್ರಿಕೆಗೆ ಬರೆದ ಗಾಂಧಿ ಮತ್ತು ಅಂಬೇಡ್ಕರ್ ಒಂದೇ ಹಾದಿಯ ಪಯಣಿಗರು ಎಂಬ ಲೇಖನ, ಇತಿಹಾಸ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿತ್ತು. ಇತಿಹಾಸದಲ್ಲಿ ಗತಕಾಲ ಮತ್ತು ಸಮಕಾಲೀನ ನಡುವಿನ ಅನುಸಂಧಾನವಾಗಿ ಪ್ರೊ. ಚಂದ್ರಶೇಖರ್ ಅವರು ವಿಶ್ಲೇಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಚರಿತ್ರೆಗೆ ಬೇಕಾಗಿರುವುದು ವಕಾಲತ್ತು ಅಲ್ಲ. ಸಂಶೋಧನೆ ಮತ್ತು ವಿಶ್ಲೇಷಣೆಯ ವಿದ್ವತ್ ಬೇಕು. ಆಗ ಚರಿತ್ರೆಯನ್ನು ನಿಖರವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಚರಿತ್ರೆಯ ಕುರಿತು ಅಂತಿಮ ತೀರ್ಮಾನ ಮಾಡಲು ಸಾಕಷ್ಟು ಅಧ್ಯಯನದ ಅಗತ್ಯವಿದೆ. ಆದರೆ ಇಂದು ಇತಿಹಾಸಕ್ಕೆ ಪಕ್ಷ ರಾಜಕೀಯದ ಸೋಂಕು ಹತ್ತಿದೆ. ಅದಕ್ಕಾಗಿ ಎಲ್ಲರೂ ಚರಿತೆಯನ್ನು ತಿರುಚಲಾಗಿದೆ ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ನಿಖರತೆ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಚರಿತ್ರೆಯ ನೈಜತೆ ನಾಶವಾಗುತ್ತಿದೆ. ಕೆಲವೊಮ್ಮೆ ಚರಿತ್ರೆಯನ್ನು ಪುರಾಣವನ್ನಾಗಿ ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ಪುರಾಣವನ್ನು ಚರಿತ್ರೆಯನ್ನಾಗಿ ಮಾಡಲಾಗುತ್ತದೆ. ಪುರಾಣದಲ್ಲಿ ಕೂಡ ಪುರಾಣಶಾಸ್ತ್ರ ಬೇರೆ, ಪುರಾಣ ಕಾವ್ಯ ಬೇರೆ ಎನ್ನುವ ವಿವೇಕ ಕೂಡ ಅನೇಕರಿಗೆ ಇಲ್ಲವಾಗಿದೆ. ಪುರಾಣಕಾವ್ಯಗಳನ್ನು ಏಕಾಏಕಿ ನಿರಾಕರಿಸುವ ಹುಸಿ ಕ್ರಾಂತಿಕಾರಿಗಳೂ ನಮ್ಮ ನಡುವೆ ಇದ್ದಾರೆ ಎಂದು ಹೇಳಿದರು.
ಭಾಷಾ ತಜ್ಞ ಕೆ.ವಿ.ನಾರಾಯಣ ಮಾತನಾಡಿ, ಚರಿತ್ರೆ ಮತ್ತು ಸಾಹಿತ್ಯದ ನುಡುವೆ ಶತ ಶತಮಾನಗಳಿಂದ ಸಂಬಂಧವಿದೆ. ದಲಿತ ಚಳವಳಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಗಾಂಧೀಜಿ ಕುರಿತು ಸಿನೆಮಾವೊಂದು ಬರುತ್ತದೆ. ಆ ಸಿನೆಮಾವನ್ನು ನಿಷೇಧಿಸಬೇಕು ಎಂದು ದಲಿತ ಹೋರಾಟಗಾರರು ಒತ್ತಾಯಿಸಿದರು. ಅದೇ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ನಾನು ಗಾಂಧಿ ಸಿನೆಮಾ ನೋಡಿದೆ ಎನ್ನುವ ಲೇಖನವನ್ನು ಬರೆದರು. ಆವಾಗಲೇ ಪ್ರೊ.ಚಂದ್ರಶೇಖರ್ ಅವರು ಗಾಂಧಿ ಮತ್ತು ಅಂಬೇಡ್ಕರ್ ಒಂದೇ ಹಾದಿಯ ಪಯಣಿಗರು ಎನ್ನುವ ಲೇಖನ ಬರೆದಿದ್ದರು. ಅದು ಚಾರಿತ್ರಿಕವಾಗಿ ವಿಶಿಷ್ಟವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪ್ರೊ.ಎಸ್.ಚಂದ್ರಶೇಖರ್ ಅವರ ಕುರಿತು ಪ್ರೊ.ಅಶ್ವತ್ಥನಾರಾಯಣ ಅವರು ಸಂಪಾದಿಸಿರುವ ‘ಚಂದ್ರಶಿಖರ’ ಅಭಿನಂದನಾ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಪುಟ್ಟಣ್ಣ, ಕೆಪಿಎಸ್‍ಸಿ ಸದಸ್ಯೆ ಪ್ರೊ.ಆರ್.ಕಾವಲಮ್ಮ, ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







