ಬಲವಂತವಾಗಿ ರೈತರ ಜಮೀನು ಕಸಿದುಕೊಳ್ಳುವುದನ್ನು ನಿಲ್ಲಿಸಿ : ಸುಬ್ಬು ಹೊಲೆಯಾರ್

ಬೆಂಗಳೂರು : ಒಂದೆರೆಡು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿರುವ ರೈತರು ಬೀದಿಗೆ ಬೀಳುವ ಆತಂಕದಲ್ಲಿದ್ದು, ಸರಕಾರ ಬಲವಂತವಾಗಿ ರೈತರ ಜಮೀನು ಕಸಿದುಕೊಂಡು ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು ಎಂದು ಹಿರಿಯ ಚಿಂತಕ ಸುಬ್ಬು ಹೊಲೆಯಾರ್ ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳ 1777 ಎಕರೆ ಕೃಷಿ ಭೂಮಿ ಸ್ವಾಧೀನವನ್ನು ಕೈಬಿಡುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಭೂ ಸತ್ಯಾಗ್ರಹದ ವೇದಿಕೆಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ, ರೈತರ ಪರವಾಗಿರುತ್ತೇನೆಂದು ಹೇಳಿದ್ದರು. ಆದರೆ, ಈಗ ವಚನ ಭ್ರಷ್ಟರಾಗಿರುವುದಲ್ಲದೆ ರೈತರಿಗೆ ನೋಟಿಸ್ ಕೊಟ್ಟು ಅಂಕಿತ ಹಾಕಲು ಮುಂದಾಗಿರುವುದು ಅನ್ನದಾತನಿಗೆ ದ್ರೋಹ ಎಸಗಿದಂತೆ ಎಂದು ಸುಬ್ಬು ಹೊಲೆಯಾರ್ ಆಕ್ರೋಶ ವ್ಯಕ್ತಪಡಿಸಿದರು.
ಚಿಂತಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಹಿಂದಿನಿಂದಲೂ ಬಗರ್‍ಹುಕುಂ ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕೆ ವಿನಃ ಅಲ್ಪಸ್ವಲ್ಪ ತುಂಡು ಭೂಮಿಯನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ನ್ಯಾಯಾಲಯ ಮಧ್ಯ ಪ್ರವೇಶಿಸಿ ರೈತರ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ರೈತನ ‘ಭೂಮಿ’ ಎನ್ನುವುದು ಮಾರಾಟದ ವಸ್ತುವಲ್ಲ. ನಾಡಿಗೆ ಅನ್ನವನ್ನು ನೀಡುವ ರೈತನಿಗೆ ಭೂಮಿಯೇ ಜೀವಾಳವಾಗಿದೆ. ಅಂತಹ ಭೂಮಿಯ ಮೇಲೆ ಕಾರ್ಪೋರೇಟ್ ಕಣ್ಣುಗಳು ಬೀಳದಂತೆ ನಾವು ಕಾಪಾಡಿಕೊಳ್ಳಬೇಕು. ಸರಕಾರ ತನ್ನ ನಿರ್ಧಾರದಿಂದ ಹಿಂದೆಸರಿಯಬೇಕು ಎಂದರು.
ಇದೇ ವೇಳೆಯಲ್ಲಿ ಭೂ ಸತ್ಯಾಗ್ರಹದ ವೇದಿಕೆಗೆ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಹಿರಿಯ ಸಾಹಿತಿ ಪ್ರೊ.ಮರುಳಸಿದ್ದಪ್ಪ, ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್ ಭೇಟಿ ಕೊಟ್ಟು ರೈತರಿಗೆ ಬೆಂಬಲ ವ್ಯಕ್ತಪಪಡಿಸಿದರು.







