ಕಸಾಪ ಕಾರ್ಯ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲು ಅಧಿಕಾರಿ ನೇಮಕ

ಬೆಂಗಳೂರು : ಕಸಾಪ ಕಾರ್ಯ ಚಟುವಟಿಕೆ ಮತ್ತು ಹಣಕಾಸು ನಿರ್ವಹಣೆಯ ಪಾರದರ್ಶಕತೆಯ ಬಗ್ಗೆ ವಿಚಾರಣೆ ನಡೆಸಲು ಸಹಕಾರ ಸಂಘಗಳ ಉಪನಿಬಂಧಕ ಪಿ.ಶಶಿಧರ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು ಆದೇಶ ನೀಡಿದ್ದಾರೆ.
ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 9 ಮತ್ತು 10 ರನ್ವಯ 2022-23ರಿಂದ ಇದುವರೆಗೂ ಅನುಮೋದಿಸಿರುವ ತಿದ್ದುಪಡಿಯ ಬಗ್ಗೆ ಪರಿಶೀಲಿಸಬೇಕು. ಸಂಘದ ನಿಯಮ-ನಿಬಂಧನೆಯ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನಿಯದು ಬಾಹಿರವಾಗಿ ಹಾಲಿ ಅಧ್ಯಕ್ಷರು ನೋಟೀಸ್ ಜಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು. 2022-23ನೇ ಸಾಲಿನಿಂದ ಇದುವರೆಗೂ ಕಸಾಪಕ್ಕೆ ಸರಕಾರ ಮತ್ತು ಇತರೆ ಮೂಲಗಳಿಂದ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೇ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
2022-23ನೇ ಸಾಲಿನಿಂದ ಇದುವರೆಗೂ ಕಸಾಪದವರು ವಾಹನಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿದಲ್ಲಿ ಮಾಡಿರುವ ಹಣದ ದುರುಪಯೋಗದ ಬಗ್ಗೆ ಪರಿಶೀಲಿಸುವುದು. 2022-23ನೇ ಸಾಲಿನಿಂದ ಇದುವರೆಗೂ ಕಟ್ಟಡ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು ಎಂದು ನಿರ್ದೇಶನ ನೀಡಿದ್ದಾರೆ.
ಕಸಾಪದಿಂದ ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸಲ್ಲಿಸದೇ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಆಡಿಟ್ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದೇ ಇರುವ ಬಗ್ಗೆ ಪರಿಶೀಲಿಸಬೇಕು. ಸಂಘದ ಆಡಳಿತ ಮಂಡಳಿ ನಿರ್ಣಯಗಳನ್ನು ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ತಮ್ಮ ಇಚ್ಛಾನುಸಾರ ದಾಖಲಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಸಂಘದ ಹಣವನ್ನು ಅಧ್ಯಕ್ಷರ ಕುಟುಂಬ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಬೇಕು. ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್)ನ್ನು ನೀಡುವಲ್ಲಿ ಆಗಿರುವ ಹಣದ ದುರುಪಯೋಗದ ಬಗ್ಗೆ ಪರಿಶೀಲಿಸಬೇಕು. 2022-23ನೇ ಸಾಲಿನಿಂದ ಇದುವರೆಗೂ ಸಂಘದಲ್ಲಿನ ಸಿಬ್ಬಂದಿ ನೇಮಕಾತಿ ನಿಯಮಬದ್ಧವಾಗಿ ನಡೆದಿರುವ ಬಗ್ಗೆ ಪರಿಶೀಲಿಸುವುದು. 2022-23ನೇ ಸಾಲಿನಿಂದ ಇದುವರೆಗೂ ಸಂಘದಲ್ಲಿ ಸಂಗ್ರಹವಾಗಿರುವ ಸಿ.ಎಸ್.ಆರ್ ಅನುದಾನದ ಹಣ ದುರುಪಯೋಗದ ಬಗ್ಗೆ ಪರಿಶೀಲಿಸುವುದು. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 11ರಡಿ ಪ್ರತಿ ವರ್ಷ ನಡೆಸಿರುವ ವಾರ್ಷಿಕ ಸರ್ವ ಸದಸ್ಯರ ಬಗ್ಗೆ ಪರಿಶೀಲಿಸುವುದು ಎಂದು ತಿಳಿಸಿದ್ದಾರೆ.







