ಶಾಲಿನಿ ರಜನೀಶ್ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ: ಬಂಧನಕ್ಕೆ ಪಟ್ಟು
ಪ್ರಕರಣ ದಾಖಲಿಸುವಂತೆ ‘ಒಡನಾಡಿ’ ಪತ್ರ

ಎನ್.ರವಿಕುಮಾರ್
ಬೆಂಗಳೂರು : ಇತ್ತೀಚಿಗೆ ಕಲಬುರಗಿ ಜಿಲ್ಲಾಧಿಕಾರಿ ಕುರಿತು ವಿವಾದಿತ ಮಾತುಗಳನ್ನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್, ಇದೀಗ ಮತ್ತೊಮ್ಮೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದಾರೆ.
ಇತ್ತಿಚೇಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸುತ್ತಿರುವ ವೇಳೆ ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂ ಎನ್. ಕರಿಬಸವನಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ರವಿಕುಮಾರ್ ಅವರು, ‘ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ’ ಎಂದು ವ್ಯಂಗ್ಯವಾಗಿ ಹೇಳಿರುವ ಬಗ್ಗೆ ‘ಇಂಡಿಯಾ ಟುಡೇ' ವರದಿ ಮಾಡಿದೆ.
ಬಂಧನಕ್ಕೆ ಪಟ್ಟು: ಈ ಕುರಿತು ಬುಧವಾರ ಮೈಸೂರಿನ 'ಒಡನಾಡಿ' ಸಂಸ್ಥೆಯ ಪರಶುರಾಮ್ ಎಂ.ಎಲ್. ಮತ್ತು ಸ್ಪಾನಿ ಕೆ.ವಿ. ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಮೊಕದ್ದಮೆ ದಾಖಲಿಸಿ ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ಎನ್.ರವಿಕುಮಾರ್ ರವರು ಹೇಳಿಕೆ ನೀಡಿರುವ ದ್ವಂದ್ವ ಮಾತುಗಳು ಆಶ್ಚರ್ಯ ಹಾಗೂ ಅಸಹನೀಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರವಿಕುಮಾರ್ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ತಾವು ದಯಮಾಡಿ ಈ ನಿಟ್ಟಿನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೋರುತ್ತಿದ್ದೇವೆ. ಇವರ ಹೇಳಿಕೆಯು ರಾಜ್ಯದಲ್ಲಿ ಉದ್ಯೋಗ ಮಾಡುತ್ತಿರುವ ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತದೆ. ಈ ಕೂಡಲೇ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎನ್ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.
‘ಬಿಜೆಪಿ ನಾಯಕ ಎನ್.ರವಿಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಬಗ್ಗೆ ಮಾತನಾಡಿರುವುದು ಕ್ರೌರ್ಯದಿಂದ ಕೂಡಿದ್ದು, ಅವರನ್ನು ಬಂಧಿಸಬೇಕುʼ
-ಕೆ.ನೀಲಾ, ಮಹಿಳಾ ಪರ ಹೋರಾಟಗಾರ್ತಿ







