ಪ್ರಜ್ವಲ್ ರೇವಣ್ಣಗೆ ಜಾಮೀನು ನೀಡಬಾರದು : ಹೈಕೋರ್ಟ್ನಲ್ಲಿ ರಾಜ್ಯ ಸರಕಾರ ವಾದ

ಪ್ರಜ್ವಲ್ ರೇವಣ್ಣ
ಬೆಂಗಳೂರು : ಆರೋಪಿ ಪ್ರಜ್ವಲ್ ರೇವಣ್ಣ ಬಹಳ ಬಲಾಢ್ಯ ವ್ಯಕ್ತಿ. ಆದರೆ ಸಂತ್ರಸ್ತೆ ಮನೆ ಕೆಲಸದ ಮಹಿಳೆ ಎಂಬುದನ್ನು ಪರಿಗಣಿಸಬೇಕು. ಆಶ್ರಯ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯಿಂದ ಹೊರಹಾಕಿಸಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಹೊಳೆನರಸೀಪುರ ಅತ್ಯಾಚಾರ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರೊ.ರವಿವರ್ಮಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣದ ವಿಚಾರಣೆಯನ್ನು ವಿಳಂಬಿಸಲು ಪ್ರಜ್ವಲ್ ರೇವಣ್ಣ ಯತ್ನಿಸಿದ್ದಾರೆ. ಈ ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭವಾಗದಿರಲು ಪ್ರಜ್ವಲ್ ಕಾರಣವಾಗಿದ್ದಾರೆ. ಪ್ರಜ್ವಲ್ ವರ್ತನೆಯನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಒಂದಲ್ಲ ಒಂದು ಕಾರಣ ನೀಡಿ ಸಾಕ್ಷ್ಯ ವಿಚಾರಣೆ ಮುಂದೂಡಲು ಯತ್ನಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇವರ ನಡವಳಿಕೆ ದಾಖಲಿಸಿದೆ. ಹೀಗಾಗಿ ವಿಳಂಬದ ಕಾರಣಕ್ಕೆ ಪ್ರಜ್ವಲ್ಗೆ ಜಾಮೀನು ನೀಡದಂತೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.





