ಪಾಕಿಸ್ತಾನಕ್ಕೆ ಭದ್ರತಾ ಮಂಡಳಿ ಅಧ್ಯಕ್ಷತೆ | ಅವಕಾಶ ತಪ್ಪಿಸುವಲ್ಲಿ ಎಡವಿದ ಪ್ರಧಾನಿ ಮೋದಿ : ಸುರ್ಜೆವಾಲಾ

ಬೆಂಗಳೂರು : ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿರುವುದು ಗಂಭೀರ ವಿಚಾರ ಆಗಿದ್ದು, ಇಂತಹ ಅವಕಾಶ ತಪ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಎಡವಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಟೀಕಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಉಗ್ರರನ್ನು ರಕ್ಷಿಸುವ ದೇಶ. ಅಂತಹ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿರುವುದು ಗಂಭೀರ ವಿಚಾರ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ಹಲವು ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಿ ಸುಮಾರು ಎಂಟು ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೂ, ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಅವಕಾಶ ಸಿಕ್ಕಿದ್ದೇಗೆ?, ಇದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಯಾಕೆ ತಪ್ಪಿಸಲಿಲ್ಲ?. ಅವಕಾಶ ತಪ್ಪಿಸುವ ಶಕ್ತಿ ಅವರಿಗೆ ಇಲ್ಲವಾಗಿದೆಯೇ? ಎಂದು ಪ್ರಶ್ನಿಸಿದರು.
ಇತ್ತೀಚೆಗಷ್ಟೇ, ಪಹಲ್ಗಾಮ್ ದಾಳಿ ನಡೆಯಿತು. ಆದರೆ, ಭಾರತಕ್ಕೆ ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದೇಶಗಳು ಬೆಂಬಲ ಸೂಚಿಸಿದವು. ನಮ್ಮ ಅಕ್ಕಪಕ್ಕದ ರಾಷ್ಟ್ರಗಳೂ ಬೆಂಬಲಕ್ಕೆ ಬರಲಿಲ್ಲ. ಉಗ್ರವಾದವನ್ನು ಖಂಡಿಸಲಿಲ್ಲ. ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಅರಿತು, ವೈಫಲ್ಯವನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.





