ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ: ಕರ್ತವ್ಯ ಲೋಪವೆಸಗಿದ ಮೂವರ ಅಮಾನತು

ಸಾಂದರ್ಭಿಕ ಚಿತ್ರ | PC: Grok
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಮೂರು ಮಂದಿ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ.
ಎಚ್ಬಿಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕ ರಮೇಶ್, ಕಂದಾಯ ವಸೂಲಿಗಾರ ಪೆದ್ದುರಾಜು ಹಾಗೂ ಕೆಂಗೇರಿ ಉಪ ವಿಭಾಗ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರ ಸಿ.ಸಂದಿಲ್ ಕುಮಾರ್ ಅವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಂದಾಯ ವಸೂಲಿಗಾರ ಪೆದ್ದರಾಜು, ಕಂದಾಯ ಪರಿವೀಕ್ಷಕ ರಮೇಶ್, ಜು.27ರಂದು ಮನೆ ಮನೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ತೊಡಗಿದ್ದು, ಸಂಬಂಧಪಟ್ಟ ಮನೆಗಳ ಮಾಲಕರು, ನಿವಾಸಿಗಳನ್ನು ಸಂಪರ್ಕಿಸದೆ ಬೇಕಾಬಿಟ್ಟಿಯಾಗಿ ಸ್ಟಿಕ್ಕರ್ ಅಂಟಿಸುತ್ತಿರುವುದನ್ನು ಸಾರ್ವಜನಿಕರು, ಸಿಸಿ ಕ್ಯಾಮೆರಾ ಮೂಲಕ ವೀಡಿಯೋ ಚಿತ್ರೀಕರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಗಮನಿಸಲಾಗಿದೆ.
ಹಾಗೆಯೇ ಕಂದಾಯ ವಸೂಲಿಗಾರ ಸಿ. ಸಂದಿಲ್ ಕುಮಾರ್ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ನಿರ್ಲಕ್ಷತೆ ತೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹೀಗಾಗಿ ಪೆದ್ದರಾಜು, ರಮೇಶ್ ಹಾಗೂ ಸಿ. ಸಂದಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.







