ಆಶಾಕಿರಣ ಯೋಜನೆ | ಪಂಚ ಗ್ಯಾರಂಟಿಗಳ ಜೊತೆಗೆ ‘ದೃಷ್ಟಿ ಗ್ಯಾರಂಟಿ’ ಸರಕಾರದ ಕೊಡುಗೆ: ಡಿ.ಕೆ.ಶಿವಕುಮಾರ್

ಬೆಂಗಳೂರು : ಕಾಂಗ್ರೆಸ್ ಸರಕಾರವು ಆಶಾಕಿರಣ ಯೋಜನೆಯನ್ನು ಅನುಷ್ಟಾನ ಮಾಡುವ ಮೂಲಕ ಪಂಚ ಗ್ಯಾರಂಟಿಗಳ ಜೊತೆಗೆ ‘ದೃಷ್ಟಿ ಗ್ಯಾರಂಟಿ’ಯನ್ನು ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಇಲ್ಲಿನ ಗೋವಿಂದರಾಜನಗರದ ಎಂ.ಸಿ ಲೇಔಟ್‍ನಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಆಶಾಕಿರಣ ದೃಷ್ಟಿ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ 393 ಕಡೆ ಆಶಾಕಿರಣ ದೃಷ್ಟಿಕೇಂದ್ರಗಳ ಉದ್ಘಾಟನೆಯಾಗುತ್ತಿದ್ದು, ಉಚಿತವಾಗಿ ಕಣ್ಣಿನ ಚಿಕಿತ್ಸೆ, ಕನ್ನಡಕ ನೀಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಸರಕಾರವು ಹಿಂದಿನಿಂದಲು ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದೆ. ಅತ್ಯಂತ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಇಲ್ಲಿ ಕಲಿತವರು ಹೊರ ದೇಶಗಳಿಗೆ ತೆರಳಿ ದೇಶಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ ಎಂದು ಅವರು ಹೇಳಿದರು.
ಶೇ.25ರಷ್ಟು ಶುಲ್ಕ ಪಡೆದು ಎಂಆರ್‌ಐ, ಸಿಟಿ ಸ್ಕ್ಯಾನ್ ಸೇವೆ: ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಬೇಕು ಎಂದು ಕ್ಷೇತ್ರದ ಶಾಸಕರಾ ಪ್ರಿಯಕೃಷ್ಣ ಸರಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಭಾಗಗಳನ್ನು ಈ ಆಸ್ಪತ್ರೆಯಲ್ಲಿ ತೆರೆದು ಜನಸೇವೆ ಮಾಡಲಾಗುತ್ತಿದೆ. ಮಾರುಕಟ್ಟೆ ದರದ ಶೇ.25ರಷ್ಟು ಮಾತ್ರ ಹಣ ತೆಗೆದುಕೊಂಡು ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ ನೀಡುವ ಆಲೋಚನೆಯೂ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆಶಾಕಿರಣ ಯೋಜನೆಯನ್ನು ಮರುವಿನ್ಯಾಸಗೊಳಿಸಿದ್ದು, ನಿರಂತರವಾಗಿ ಕಣ್ಣಿನ ಆರೋಗ್ಯ ಸೇವೆ ಒದಗಿಸುವತ್ತ 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಕಣ್ಣಿನ ಪೊರೆ ಶಸ್ತ್ರಚಕಿತ್ಸೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದರು.
ಇದೇ ವೇಳೆ ಯೋಜನೆಯ ಲಾಭ ಪಡೆದವರಿಗೆ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದರು. ಸ್ಥಳೀಯ ಶಾಸಕ ಪ್ರಿಯಾ ಕೃಷ್ಣ, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಅವಿನಾಶ್ ಮೆನನ್ ರಾಜೇಂದ್ರನ್ ಮತ್ತಿತರರು ಉಪಸ್ಥಿತರಿದ್ದರು.
ಕಣ್ಣಿನ ಆರೈಕೆಗೆ ರಾಜ್ಯ ಸರಕಾರ ಜಾರಿಗೆ ತಂದ ಆಶಾಕಿರಣ ಒಂದು ಮಾದರಿ ಯೋಜನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಯೋಜನೆಯನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕರ್ನಾಟಕಕ್ಕೆ ತಂಡವನ್ನು ಕಳುಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಿದ್ಧಪಡಿಸುತ್ತಿದ್ದು, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಶೀಘ್ರದಲ್ಲಿಯೇ ಜಾರಿಗೆ ತರಬೇಕು.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ







