ಬೆಂಗಳೂರು | ಸಾಲ ವಾಪಸ್ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮನೆಗೆ ಬೆಂಕಿ ಹಚ್ಚಿದ ಘಟನೆ ಸಂಬಂಧ ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಜು.1ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಬೆಂಕಿ ಹಚ್ಚಿದ ಆರೋಪಿಯನ್ನು ಸುಬ್ರಮಣಿ ಎಂದು ಗುರುತಿಸಲಾಗಿದೆ. ಈ ಸಂಬಂಧ ವೆಂಕಟರಮಣಿ ಎಂಬುವರ ಪುತ್ರ ನೀಡಿದ ದೂರಿನನ್ವಯ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೆಂಕಟರಮಣಿ ಎಂಬವರ ಬಳಿ ಆರೋಪಿಯ ಸಹೋದರಿ ಪಾರ್ವತಿ ಅವರು ತನ್ನ ಮಗಳ ಮದುವೆಗಾಗಿ, 5 ಲಕ್ಷ ರೂ. ಹಣ ಪಡೆದಿದ್ದಳು. ಹಣ ಪಡೆದು ಹಲವು ವರ್ಷಗಳಾದರೂ ವಾಪಸ್ ನೀಡಿರಲಿಲ್ಲ. ಇದರಿಂದ ವೆಂಕಟರಮಣಿ ಹಣ ವಾಪಸ್ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ.
ಹಣ ವಾಪಸ್ ಕೇಳಿದ್ದಕ್ಕೆ ಪಾರ್ವತಿ ಹಾಗೂ ಆಕೆಯ ಮಗಳು ವೆಂಕಟರಮಣಿ ಅವರ ಬಳಿ ಗಲಾಟೆ ನಡೆಸಿದ್ದು, ಈ ವಿಚಾರಕ್ಕೆ ಕೋಪಗೊಂಡ ಆರೋಪಿ, ವೆಂಕಟರಮಣಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.





