‘ಕೆಎಸ್ಸಾರ್ಟಿಸಿ ಟಿಕೆಟ್ ರೌಂಡಫ್’ ವ್ಯವಸ್ಥೆ ಸ್ಥಗಿತಗೊಳಿಸಲು ತೀರ್ಮಾನ

PC : wikipedia
ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಇಟಿಎಂ ಮತ್ತು ಅವತಾರ್ ಕೌಂಟರ್ಗಳಲ್ಲಿ ಪಡೆಯುವ ಟಿಕೆಟ್ ವ್ಯವಸ್ಥೆಯಲ್ಲಿ ಜಾರಿಯಲ್ಲಿದ್ದ 101ರೂ.ಇದ್ದರೆ 105ರೂ., 106ರೂ.ಇದ್ದರೆ 110ರೂ. ಪಡೆಯುತ್ತಿದ್ದ ಟಿಕೆಟ್ ರೌಂಡಫ್’ ವ್ಯವಸ್ಥೆ ಸ್ಥಗಿತಗೊಳಿಸಲು ಕೆಎಸ್ಸಾರ್ಟಿಸಿ ತೀರ್ಮಾನ ಮಾಡಿದೆ.
ಈ ಸಂಬಂಧ ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಗಿ ಸಾಮಾಜಿಕ ಜಾಲತಾಣದಲ್ಲಿಯೂ ಇದೇ ವಿಚಾರ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಟಿಕೆಟ್ ರೌಂಡಫ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ. ಜು.2ರ ರಾತ್ರಿ 9ಗಂಟೆ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಅಲಂಗಾರು ಕಡೆಗೆ ಕೆಎಸ್ಸಾರ್ಟಿಸಿ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಹೊರಟ್ಟಿದ್ದು, ಟಿಕೆಟ್ ದರ 46ರೂ.ಆಗಿದ್ದರೂ ನಿರ್ವಾಹಕ 50 ರೂ.ಪಡೆದಿದ್ದಾನೆ ಎಂದು ಆಕ್ಷೇಪಿಸಿದ್ದರು.
ಕೆಎಸ್ಸಾರ್ಟಿಸಿ ಸ್ಪಷ್ಟಣೆ: ‘ಟಿಕೆಟ್ ರೌಂಡಫ್ ವ್ಯವಸ್ಥೆಯು ಪ್ರತಿಷ್ಠಿತ ಸಾರಿಗೆಗಳಲ್ಲಿ(ಪ್ರೀಮಿಯಂ ಸೇವೆ ನೀಡುವ 400 ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿತ್ತು. ಅದರಲ್ಲೂ ಇಟಿಎಂ ಮತ್ತು ಅವತಾರ್ ಕೌಂಟರ್ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣ ದರವನ್ನು ರೌಂಡಫ್ ಮಾಡಲು ಆದೇಶಿಸಲಾಗಿತ್ತು.
ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಪಿಒಎಸ್ ಯಂತ್ರಗಳನ್ನು ಹಾಗೂ ಇಟಿಎಂ ಯಂತ್ರಗಳಲ್ಲಿ ಯಪಿಐ ವ್ಯವಸ್ಥೆ ಒದಗಿಸಿದ್ದರಿಂದ ಪ್ರಯಾಣದರವನ್ನು ರೌಂಡಫ್ ಮಾಡುವ ಅವಶ್ಯಕತೆ ಇಲ್ಲದಿರುವುದರಿಂದ ಈಗ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದ್ದು, ತಂತ್ರಾಂಶದಲ್ಲಿ ಈ ಸಂಬಂಧ ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿರುತ್ತದೆ’ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಪ್ರಕಟಣೆಯಲ್ಲಿ ಸ್ಪಷ್ಟಣೆ ನೀಡಿದ್ದಾರೆ.