ಚಿತ್ರಕಲಾ ಪರಿಷತ್‍ಗೆ ಹುಬ್ಬಳ್ಳಿ-ಧಾರವಾಡದಲ್ಲಿ ಜಾಗ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು : ಚಿತ್ರಕಲೆಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಧಾರವಾಡ ಅಥವಾ ಹುಬ್ಬಳ್ಳಿ ಪ್ರದೇಶದಲ್ಲಿ ಚಿತ್ರಕಲಾ ಪರಿಷತ್‍ಗೆ ಜಾಗ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.
ಶನಿವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ನಡೆದ ಪ್ರೊ.ಎಂ.ಎಸ್.ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ ತನ್ನ ಕಾರ್ಯಗಳಿಂದ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದು ಹೇಳಿದರು.
1974ರಲ್ಲಿ ಚಿತ್ರಕಲಾ ಪರಿಷತ್‍ಗೆ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಜಾಗ ನೀಡಿದರು. ನಂತರ ಎಸ್.ಎಂ.ಕೃಷ್ಣ ಅವರು ಉತ್ತರಹಳ್ಳಿಯಲ್ಲಿ ಚಿತ್ರಕಲಾ ಪರಿಷತ್‍ಗಾಗಿ 7 ಎಕರೆ ಜಾಗ ನೀಡಿದರು ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಕಲಾವಿದರ ಮಾತುಗಳು ಅವರ ಕೃತಿಯ ಮೂಲಕ ಪ್ರಕಟಗೊಳ್ಳುತ್ತವೆ. ಆದ ಕಾರಣ, ಬಹುತೇಕ ಕಲಾವಿದರು ಹೆಚ್ಚು ಮಾತನಾಡುವುದಿಲ್ಲ. ಯಾವುದೇ ಸಂಸ್ಥೆ ಉನ್ನತ ಯಶಸ್ಸು ಕಂಡಿದೆ ಎಂದರೆ ಅದರ ಹಿಂದೆ ಶ್ರಮ ಇರುತ್ತದೆ ಎಂದು ತಿಳಿಸಿದರು.
ಪ್ರೊ.ನಂಜುಡ ರಾವ್ ಅವರು ದೇವರಾಜ್ ಅರಸು ಅವರು ಚಿತ್ರ ಕಲಾ ಪರಿಷತ್‍ಗೆ ಕೇವಲ ಜಾಗ ಮಾತ್ರವಲ್ಲದೇ, ಕಟ್ಟಡ ಕಟ್ಟಲು ಅನುದಾನವನ್ನೂ ನೀಡಿದರು. ಸರಕಾರ ನೀಡಿದ ಅನುದಾನಕ್ಕೆ ಸಮವಾಗಿ ಎಚ್.ಕೆ.ಕೇಜ್ರಿವಾಲ್ ಅವರು ಧನಸಹಾಯ ಮಾಡಿ ಕಟ್ಟಡ ನಿರ್ಮಾಣಕ್ಕೆ ಕಾರಣರಾದರು ಎಂದು ಹೇಳಿದರು.
ಇದೇ ವೇಳೆ ಕಲಾವಿದೆ ಮಾಧವಿ ಪಾರೆಖ್ ಅವರಿಗೆ 1 ಲಕ್ಷ ರೂ. ನಗದು ಒಳಗೊಂಡ ಪ್ರೊ.ಎಂ.ಎಸ್.ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಪ.ಸ.ಕುಮಾರ್, ಚಿತ್ರಕಲಾ ಪರಿಷತ್‍ನ ಜಂಟಿ ಕಾರ್ಯದರ್ಶಿ ಬಿ.ಎಲ್.ಶ್ರೀನಿವಾಸ್, ಪ್ರದಾನ ಕಾರ್ಯದರ್ಶಿ ಎಸ್.ಎನ್.ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.