ಭಾರತವು ಆರ್ಥಿಕತೆಯಲ್ಲಿ ಗಮನಾರ್ಹ ಸದೃಢತೆ ಸಾಧಿಸಿದೆ : ಪಿಯೂಷ್ ಗೋಯಲ್

ಬೆಂಗಳೂರು: ನಾವೀನ್ಯತೆ, ಉದ್ಯಮಶೀಲತೆ ಮತ್ತು ದೃಢವಾದ ನೀತಿ ಬೆಂಬಲದಿಂದ ಕೋವಿಡ್ ನಂತರದ ಭಾರತದ ಆರ್ಥಿಕತೆಯು ಗಮನಾರ್ಹ ಸದೃಢತೆಯನ್ನು ಸಾಧಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರತಿಪಾದಿಸಿದರು.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ಸಹಭಾಗಿತ್ವದಲ್ಲಿ ಉದ್ಯಮದ ಮುಖಂಡರು, ನವೋದ್ಯಮಗಳು ಮತ್ತು ಡೀಪ್ ಟೆಕ್ ನಾವೀನ್ಯಕಾರರ ಜೊತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರಂಭಿಕ ಮತ್ತು ಬೆಳವಣಿಗೆಯ ಹಂತದ ಡೀಪ್ ಟೆಕ್ ನವೋದ್ಯಮಗಳನ್ನು ಬೆಂಬಲಿಸುವ 10 ಸಾವಿರ ಕೋಟಿ ರೂ.ಗಳ ‘ನವೋದ್ಯಮಗಳಿಗಾಗಿ ಫಂಡ್ ಆಫ್ ಫಂಡ್ಸ್’ ಅನ್ನು ಪ್ರಾರಂಭಿಸುವಲ್ಲಿ ಸರಕಾರದ ಪ್ರಯತ್ನಗಳನ್ನು ವಿವರಿಸಿದ ಅವರು, ಇದೇ ವೇಳೆ ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ದೀರ್ಘಾವಧಿ, ಕಡಿಮೆ ವೆಚ್ಚದ ಬಂಡವಾಳವನ್ನು ಒದಗಿಸುವ 1 ಲಕ್ಷ ಕೋಟಿ ರೂ.ಗಳ ‘ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆ’ ಯೋಜನೆಯ ಬಗ್ಗೆಯೂ ತಿಳಿಸಿದರು.
ಎಲೆಕ್ಟ್ರಾನಿಕ್ಸ್, ಉತ್ಪಾದನೆ, ಔಷಧ ಹಾಗೂ ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟ, ವಿನ್ಯಾಸ ಮತ್ತು ಸ್ಪರ್ಧಾತ್ಮಕತೆಯ ಸುಧಾರಣೆಗಳಿಂದ ಪ್ರೇರಿತವಾದ ‘ಮೇಡ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕವಾಗಿ ಖ್ಯಾತಿ ಹೆಚ್ಚುತ್ತಿದೆ. ಇದು ಭಾರತದ ಬೆಳೆಯುತ್ತಿರುವ ಆರ್ಥಿಕ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.
ವ್ಯಾಪಾರ ಸ್ನೇಹಿ ವಾತಾವರಣವನ್ನು ಬೆಳೆಸುವ ನಿಟ್ಟಿನಲ್ಲಿ ನಿಯಂತ್ರಕ ಚೌಕಟ್ಟುಗಳನ್ನು ಸರಾಗಗೊಳಿಸುವ ಪ್ರಾಮುಖ್ಯತೆ, ಪೇಟೆಂಟ್ ಗಳು ಮತ್ತು ಟ್ರೇಡ್ ಮಾರ್ಕ್ ಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಪ್ರಾಮುಖ್ಯತೆಯ ಬಗ್ಗೆಯೂ ಅವರು ಮಾತನಾಡಿದರು.
ಈ ಅಧಿವೇಶನದಲ್ಲಿ ಪ್ರಮುಖ ನವೋದ್ಯಮಗಳ ಸಂಸ್ಥಾಪಕರು, ಉದ್ಯಮದ ನಾಯಕರು, ಡೀಪ್ ಟೆಕ್ ಆವಿಷ್ಕಾರಕರು, ಸಾಹಸೋದ್ಯಮ ಬಂಡವಾಳಶಾಹಿಗಳು ಮತ್ತು ಶೈಕ್ಷಣಿಕ ಪ್ರತಿನಿಧಿಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖ ಪಾಲುದಾರರು ಭಾಗವಹಿಸಿದ್ದರು.
ಸಂವಾದದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಉದ್ಯಮ ವಲಯದ ದಿಗ್ಗಜರಾದ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಶಾ, ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಡಾ.ದೇವಿ ಪ್ರಸಾದ್ ಶೆಟ್ಟಿ, ಸಿಐಐ ಅಧ್ಯಕ್ಷ ಕಮಲ್ ಬಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.