ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲೇಬೇಕು : ಸಮೀಉಲ್ಲಾ ಖಾನ್

ಬೆಂಗಳೂರು : ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ವಿವಾದಿತ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲೇಬೇಕು. ವಕ್ಫ್ ಆಸ್ತಿಗಳು ಸರಕಾರದ ಆಸ್ತಿಗಳಲ್ಲ. ಈ ಆಸ್ತಿಗಳನ್ನು ಸಮುದಾಯದ ಶ್ರೇಯೋಭಿವೃದ್ಧಿಯ ವಿವಿಧ ಉದ್ದೇಶಗಳಿಗಾಗಿ ಸಮುದಾಯದ ಹಿರಿಯರೇ ದಾನವಾಗಿ ನೀಡಿರುವ ಆಸ್ತಿಗಳು ಎಂದು ಮತ್ತಿಕೆರೆಯ ಮಸ್ಜಿದೆ ತಾಹಾ ಆಡಳಿತ ಸಮಿತಿಯ ಅಧ್ಯಕ್ಷ ಸಮೀಉಲ್ಲಾ ಖಾನ್ ತಿಳಿಸಿದರು.
ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕರೆಯಂತೆ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮತ್ತಿಕೆರೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿಗಳನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದರು.
ಈಗಾಗಲೇ ವಕ್ಫ್ ನ್ಯಾಯಾಧೀಕರಣ ಇದೆ. ಅಲ್ಲಿ ವಕ್ಫ್ ಸಂಬಂಧಿತ ವಿವಾದಗಳನ್ನು ನ್ಯಾಯಮೂರ್ತಿ ಆಲಿಸಿ ತೀರ್ಪುಗಳನ್ನು ನೀಡುತ್ತಾರೆ. ಅಲ್ಲಿನ ತೀರ್ಪು ಒಪ್ಪಿತವಾಗದಿದ್ದರೆ ನಾವು ಉನ್ನತ ನ್ಯಾಯಾಲಯಗಳ ಮೊರೆ ಹೋಗಲು ಅವಕಾಶವಿದೆ. ಆದರೆ, ಈ ವಕ್ಫ್ ತಿದ್ದುಪಡಿ ಕಾಯ್ದೆಯಡಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅಧಿಕಾರ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನೀಡುವ ತೀರ್ಪು ಪ್ರಶ್ನಿಸಿ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಅವರು ಹೇಳಿದರು.
ಬೇರೆ ಯಾವುದೇ ಧರ್ಮಗಳ ಧಾರ್ಮಿಕ ಸಂಸ್ಥೆಗಳಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಇಲ್ಲದಿರುವಾಗ ವಕ್ಫ್ ಮಂಡಳಿಯಲ್ಲಿ ಮಾತ್ರ ಯಾಕೆ ಅನ್ಯ ಧರ್ಮೀಯರಿಗೆ ಸದಸ್ಯತ್ವ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ಸಮಾಜದಲ್ಲಿನ ಕೋಮು ಸೌಹಾರ್ದತೆ ಹಾಳಾಗಬಹುದು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಚೌಕಟ್ಟಿನಲ್ಲಿ ನಿರಂತರ ಹೋರಾಟ ಮಾಡುತ್ತೇವೆ ಎಂದು ಸಮೀಉಲ್ಲಾ ಖಾನ್ ಹೇಳಿದರು.
ಪ್ರತಿಭಟನಾ ಧರಣಿಯಲ್ಲಿ ಮಸ್ಜಿದೆ ತಾಹಾ ಆಡಳಿತ ಸಮಿತಿಯ ಕಾರ್ಯದರ್ಶಿ ಶಾಜಹಾನ್, ಕೋಶಾಧ್ಯಕ್ಷ ಸಾಗರ್ ಸಮಿಉಲ್ಲಾ, ಪದಾಧಿಕಾರಿಗಳಾದ ರಫಿಕ್, ನವಾಝ್, ಅತೀಖ್, ಅಕ್ರಮ್, ಶರೀಫ್, ಬಾಬು, ಬೈತುಲ್ ಮಾಲ್ ಪದಾಧಿಕಾರಿಗಳಾದ ನಝೀರ್, ಅಮೀರ್, ಫಯಾಝ್, ಚಾಂದ್, ಪರ್ವೀಝ್, ಸಾಜಿದ್, ಮುಶೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.