ಮೆಟ್ರೋ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ : ಎನ್.ನಾಗರಾಜು
ಬಿಎಂಆರ್‌ಸಿಎಲ್ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ಜಯನಗರದ ಆರ್.ವಿ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಕೇಂದ್ರ ಸರಕಾರ ಮೆಟ್ರೋ ಕಾಮಗಾರಿಯನ್ನು 2021 ರೊಳಗಾಗಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಮೆಟ್ರೋ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ಜಯನಗರ ಭಾಗದ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಜಯನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್. ನಾಗರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಶಾಂತಿ ನಗರದಲ್ಲಿರುವ ಬಿಎಂಆರ್‍ಸಿಎಲ್ ಮುಖ್ಯ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗ ಮೆಟ್ರೋ ಮತ್ತು ಕಾಳೇನ ಅಗ್ರಹಾರ ಗುಲಾಬಿ ಮಾರ್ಗ ಯೋಜನೆಗಳನ್ನು ಕೇಂದ್ರ ಸರಕಾರ ವಿಳಂಬ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿ ಹಾಗೂ ಕಾಮಗಾರಿಯನ್ನು ತ್ವರಿತ ರೀತಿಯಲ್ಲಿ ಚಾಲನೆ ನೀಡಿಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಗುಲಾಬಿ ಮಾರ್ಗ ಮೆಟ್ರೋ ರೈಲು ಯೋಜನೆಗಳು ನಗರದ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿವೆ. ಈ ಯೋಜನೆಗಳು ಕೇಂದ್ರ ಸರಕಾರದ ವಿಳಂಬದಿಂದಾಗಿ ವರ್ಷಗಳು ಕಳೆದರೂ ಇನ್ನೂ ಆರಂಭವಾಗಿಲ್ಲ ಎಂಬುದು ಜನತೆಗೆ ಭಾರೀ ನಿರಾಸೆ ಉಂಟುಮಾಡಿದೆ. ಕೇಂದ್ರ ಸರಕಾರ ಮತ್ತು ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳು, ರೈಲ್ವೆ ಸುರಕ್ಷತಾ ಆಯುಕ್ತರ ಅಂತಿಮ ತಪಾಸಣೆ ಮುಗಿಯದಿರುವುದು ವಿಳಂಬಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೇ, ಮೆಟ್ರೋ ರೈಲುಗಳಲ್ಲಿ ಬಳಕೆಯಾಗುವ ಸಿಗ್ನಲ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳು, ಮೆಟ್ರೋ ರೈಲು ಬೋಗಿಗಳ ಸರಬರಾಜು ತಡವಾಗಿರುವುದು, ಕೇಂದ್ರ ಸರಕಾರದ ಅನುಮತಿ ಪ್ರಕ್ರಿಯೆಗಳು, ಯೋಜನೆ, ಟೆಂಡರ್ ಹಾಗೂ ಇತರೇ ಸಮಸ್ಯೆಗಳೂ ವಿಳಂಬಕ್ಕೆ ಕಾರಣವಾಗಿವೆ. ಕೇಂದ್ರ ಸರಕಾರ ಬಾಕಿ ಇರುವ ಎಲ್ಲ ತಾಂತ್ರಿಕ, ಆಡಳಿತಾತ್ಮಕ ಅನುಮತಿಗಳನ್ನು ಪೂರ್ಣಗೊಳಿಸಬೇಕು. ಮೆಟ್ರೋ ಬೋಗಿಗಳ ತುರ್ತು ಸರಬರಾಜು ಮತ್ತು ಅಗತ್ಯ ಪರಿಶೀಲನಾ ಕಾರ್ಯಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆಯಲ್ಲಿ ಬಿಎಂಆರ್‍ಸಿಎಲ್ ಅಧ್ಯಕ್ಷ ಮಹೇಶ್ವರ್ ರಾವ್‍ಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ಮಂಜುನಾಥ ರೆಡ್ಡಿ, ಜಿಲ್ಲಾಧ್ಯಕ್ಷರುಗಳಾದ ಮಂಜುನಾಥ್, ಕೆ.ವಿ.ಗೌತಮ್, ಮಾಜಿ ಪಾಲಿಕೆ ಸದಸ್ಯ ಸುದ್ದಗುಂಟೆ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.