ಬಾಬು ಜಗಜೀವನ್ ರಾಮ್ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ: ಸಿಎಂ ಸಿದ್ದರಾಮಯ್ಯ
ಡಾ.ಬಾಬು ಜಗಜೀವನ್ ರಾಮ್ 38ನೇ ಪುಣ್ಯ ಸ್ಮರಣೆ

ಬೆಂಗಳೂರು : ದೇಶದ ಕೃಷಿಯ ಏಳಿಗೆಗೆ ಹಾಗೂ ಸಾಮಾಜಿಕ ನ್ಯಾಯ ಕೊಡಲು ಶ್ರಮಿಸಿದ ಡಾ.ಬಾಬು ಜಗಜೀವನ್ ರಾಮ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ಡಾ.ಬಾಬು ಜಗಜೀವನ್ ರಾಮ್ ಅವರ 38ನೆ ಪುಣ್ಯ ಸ್ಮರಣೆ ಹಿನ್ನೆಲೆ ವಿಧಾನಸೌಧದಲ್ಲಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಆಧುನಿಕ ಭಾರತವಾಗಲು ಡಾ.ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಬಹಳ ಹೆಚ್ಚಿದೆ. ಅವರು ಕೇಂದ್ರದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿದ್ದು, ಉತ್ತಮ ಆಡಳಿತಗಾರರಾಗಿದ್ದರು. ಕೃಷಿ ಸಚಿವರಾಗಿ ಅವರು ಉತ್ತಮವಾಗಿ ಕೆಲಸ ಮಾಡಿದ್ದರು ಎಂದು ನುಡಿದರು.
ಡಾ.ಬಾಬು ಜಗಜೀವನ್ ರಾಮ್ ಅವರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸಾಮಾಜಿಕ ನ್ಯಾಯ ಕೊಡಲು ಜಗಜೀವನ್ ರಾಮ್ ಬಹಳಷ್ಟು ಶ್ರಮಿಸಿದ್ದರು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಬಿ.ಸುರೇಶ್, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.