ಶೋಷಿತ ವರ್ಗಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ವೈಚಾರಿಕತೆ-ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ’

ಬೆಂಗಳೂರು : ‘ಶಿಕ್ಷಣದಿಂದ ವಂಚಿತರಾಗದೇ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕರೆ ನೀಡಿದ್ದಾರೆ.
ರವಿವಾರ ತಾವರೆಕೆರೆ ಬಳಿಯ ಕೆತೋಹಳ್ಳಿಯಲ್ಲಿರುವ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. 10ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಒಂದು ಎಕರೆ ಜಾಗವನ್ನು ಮಹೇಶ್ ಕೊಟ್ಟಿದ್ದು ಶ್ಲಾಘನೀಯ. ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ತಿಳಿಸಿದರು.
ಕಾಗಿನೆಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿಯವರು ಯಾವುದೇ ಕಟ್ಟಡಗಳನ್ನು ಕ್ಷಿಪ್ರವಾಗಿ ಕಟ್ಟುತ್ತಾರೆ. ಎರಡೇ ವರ್ಷಗಳಲ್ಲಿ ಭಕ್ತರಿಂದ ವಂತಿಗೆ ಪಡೆದು ನಿರ್ಮಾಣ ಮಾಡಿದ್ದಾರೆ. ಸಚಿವ ಸುರೇಶ್ 50ಲಕ್ಷ ರೂ.ಗಳ ದೇಣಿಗೆ ನೀಡಿದ್ದು, ಈ ಕಾರ್ಯಕ್ಕೆ ವಂತಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಕುಟೀರವನ್ನು ನಿರ್ಮಾಣ ಮಾಡಲು ಎಲ್ಲರ ಸಹಾಯ ಪಡೆದಿದ್ದಾರೆ. ಸುಮಾರು 4ಕೋಟಿ ರೂ.ಗಳಷ್ಟು ಹಣವನ್ನು ವೆಚ್ಚ ಮಾಡಿದ್ದು, ಇತರರು ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಮಠ ಬೆಳೆಯಬೇಕು. ಬೆಳೆಯಬೇಕಾದರೆ ಜನರಿಂದಲೇ ಬೆಳೆಯಬೇಕು. ಮಠ-ಮಾನ್ಯಗಳು ಬೆಳೆಯಬೇಕಾದರೆ ಜನರಿಂದ ಮಾತ್ರ ಸಾಧ್ಯ. ಸರಕಾರದ ಮೇಲೆ ಅವಲಂಬಿತವಾದರೆ ಬೆಳೆಯಲು ಸಾಧ್ಯವಿಲ್ಲ ಎಂದರು.
1992ರಲ್ಲಿ ಪ್ರಾರಂಭವಾದ ಮಠವನ್ನು ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ 25ಲಕ್ಷ ರೂ.ಗಳ ನೀಡಲು ಮುಂದಾದಾಗ, ಅದನ್ನು ನಿರಾಕರಿಸಲಾಯಿತು. ಉದ್ಯಮಿ ಹರಿ ಖೋಡೆಯವರು ಮಠ ಕುರುಬರ ಮಠವಲ್ಲ, ದಲಿತರು, ಅಲ್ಪಸಂಖ್ಯಾತರು ಹಾಗೂ ಮಠವನ್ನು ಹೊಂದಿಲ್ಲದವರಿಗೆ ಸೇರಿದ ಮಠ ಎಂದು ಘೋಷಣೆ ಮಾಡಿದ್ದರು ಎಂದು ಸ್ಮರಿಸಿದರು.
ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ: ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ. ಶಿಕ್ಷಣ, ಆರೋಗ್ಯ, ಸಂಘಟನೆ ಸಾಧ್ಯವಾಗುತ್ತಿರಲಿಲ್ಲ. ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕು ಎಂದು ಬಸವಾದಿ ಶರಣರು, ಕನಕದಾಸರು, ಗಾಂಧಿ, ಅಂಬೇಡ್ಕರ್ ಹಾಗೂ ಸಂವಿಧಾನ ಹೇಳಿರುವುದು. ಸರ್ವೋದಯವಾಗಬೇಕೆಂದು ಇವರೆಲ್ಲರೂ ಕರೆ ನೀಡಿದ್ದರು. ಕುವೆಂಪು ಸರ್ವರಿಗೂ ಸಮಪಾಲು, ಸಮಬಾಳು ಇರಬೇಕೆಂದು ಕರೆ ನೀಡಿದರು. ಅಂತಿಮವಾಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂದರು.
ಗುಲಾಮಗಿರಿಯಿಂದ ದೂರವಾಗಬೇಕು: ಡಾ.ಅಂಬೇಡ್ಕರ್ ಹೇಳಿದಂತೆ ಜಾತಿಯತೆ ವಾಸ್ತವವಾಗಿದ್ದು, ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಶೋಷಿತ ವರ್ಗದ ಜನರು ಪಾಲಿಸಬೇಕಾದ ಅಂಶಗಳು. ವಿದ್ಯೆಯಿಂದ ಮಾತ್ರ ಸ್ವಾಭಿಮಾನ ಬೆಳೆದು ಮನುಷ್ಯರಾಗಲು ಸಾಧ್ಯ. ಇಲ್ಲವೇ ಗುಲಾಮಗಿರಿ ನಮ್ಮಲ್ಲಿ ಮನೆಮಾಡುತ್ತದೆ. ಸಮುದಾಯವನ್ನು ಬೆಳೆಸಿ ಇತರರನ್ನು ಬೆಳೆಸಿ ಎಂದು ಅವರು ತಿಳಿಸಿದರು.
ಬೆಂಗಳೂರಿನ ಬನಶಂಕರಿಯಲ್ಲಿ ಕಾನೂನು ಕಾಲೇಜು ಮತ್ತು ಯುಪಿಎಸ್‍ಸಿ ತರಬೇತಿಗಾಗಿ ಕಟ್ಟಡವನ್ನು ಈಗಾಗಲೇ ನಿರ್ಮಿಸಲಾಗಿದೆ. ಕುರುಬರ ಸಂಘದ ನೂತನ ಕಟ್ಟಡ ನಿರ್ಮಾಣವನ್ನು 34 ಕೋಟಿ ರೂ.ಕೈಗೆತ್ತಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಲ್ಲಿ 300 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮತ್ತು ಯುಪಿಎಸ್‍ಸಿ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಶ್ರೀ ಕಾಗಿನೆಲೆ ಗುರುಪೀಠಕ್ಕೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರಂಜನಾನಂದ ಸ್ವಾಮಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಚಿವ ಬೈರತಿ ಸುರೇಶ್, ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ, ಬಸವರಾಜ ಶಿವಣ್ಣ, ಹುಲಿನಾಯ್ಕರ್, ಆರ್.ಶಂಕರ್, ಮಂಜುನಾಥ್, ಶ್ರೀನಿವಾಸ್, ಭೀಮಸೇನಾ ಚಿಮ್ಮನಕಟ್ಟಿ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಮಠಗಳಿಗೆ ಜಮೀನು ನೀಡಲು ಪರಿಶೀಲನೆ: ‘ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಯಲ್ಲಿ 80 ಎಕರೆ ಸರಕಾರಿ ಜಮೀನನ್ನು ವಿವಿಧ ಸಮಾಜದ ಮಠಗಳಿಗೆ ಹಂಚುವ ಬಗ್ಗೆ ಸರಕಾರ ಪರಿಶೀಲಿಸಿದೆ. ವಿವಿಧ ಸಮಾಜದ ಸ್ವಾಮಿಗಳು ಕೋರಿಕೆಯಂತೆ ಅಭಿವೃದ್ಧಿಗೆ ಅನುದಾನ ನೀಡಲು ಪರಿಶೀಲಿಸಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ