ಮರಣೋತ್ತರ ವರದಿಗಳನ್ನು ಪಡೆಯಲು ಪೋರ್ಟಲ್ ಜಾರಿ ಮಾಡಿದ ಆರೋಗ್ಯ ಇಲಾಖೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಮರಣೋತ್ತರ ವರದಿಗಳನ್ನು ಹಾಗೂ ವೈದ್ಯಕೀಯ ಕಾನೂನು ಪ್ರಮಾಣ ಪತ್ರಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲು ಎಂಇಡಿಎಲ್ಇಎಪಿಆರ್(MEDLEAPR) ಅಪ್ಲಿಕೇಶನ್ ಪೋರ್ಟಲ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾರಿ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಮರಣೋತ್ತರ ವರದಿ ಹಾಗೂ ವೈದ್ಯಕೀಯ ಕಾನೂನು ಪ್ರಮಾಣ ಪತ್ರಗಳನ್ನು ನೀಡುವಲ್ಲಿ ತೊಡಗಿರುವ ಎಲ್ಲ ವೈದ್ಯಕೀಯ ಅಧಿಕಾರಿಗಳು, ವೈದ್ಯರು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು.
ವೈದ್ಯರ ನೋಂದಣಿಯ ನಂತರ, ಸಂಬಂಧಪಟ್ಟ ನೋಡಲ್ ಅಧಿಕಾರಿಯು ಎರಡು ದಿನಗಳಲ್ಲಿ ಅವರಿಗೆ ಆಸ್ಪತ್ರೆಯಿಂದ ನೀಡಲಾದ ಐಡಿ ಕಾರ್ಡ್ ಅನ್ನು ಪರಿಶೀಲಿಸುವ ಮೂಲಕ ವೈದ್ಯರ ಖಾತೆಯನ್ನು ಅನುಮೋದಿಸುತ್ತಾರೆ. ವೈದ್ಯರು ವರದಿ ಮತ್ತು ಪ್ರಮಾಣ ಪತ್ರಗಳನ್ನು ಪೋರ್ಟಲ್ನಲ್ಲಿ ಮಾತ್ರ ಸಿದ್ಧಪಡಿಸಿ ಸಲ್ಲಿಸಬೇಕು. ಯಾವುದೇ ಕೈಬರಹದ ವರದಿಯನ್ನು ನೀಡುವಂತಿಲ್ಲ.
ಪೋರ್ಟಲ್ ಕಾರ್ಯನಿರ್ವಹಿಸದಿದ್ದಲ್ಲಿ, ನಿಗದಿತ ಸ್ವರೂಪದಲ್ಲಿ ಕಂಪ್ಯೂಟರ್ ಟೈಪ್ ಮಾಡಿದ ವರದಿಗಳನ್ನು ತಕ್ಷಣವೇ ನೀಡಬೇಕು. ನಂತರ ಸಾಧ್ಯವಾದಷ್ಟು ಬೇಗ ಅಂದರೆ 24 ಗಂಟೆಗಳ ಒಳಗೆ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ವರ್ಗಾವಣೆ/ನಿಯೋಜನೆ/ಬಡ್ತಿ/ರಾಜೀನಾಮೆ ಸಂದರ್ಭದಲ್ಲಿ, ಸಂಬಂಧಪಟ್ಟ ಆಸ್ಪತ್ರೆಯ ನೋಡಲ್ ಅಧಿಕಾರಿ, ಪೋರ್ಟಲ್ನ ಉಸ್ತುವಾರಿಗೆ ತಿಳಿಸಿ, ಪೋರ್ಟಲ್ನಲ್ಲಿ ನವೀಕರಣವನ್ನು ಖಚಿತಪಡಿಸಿಕೊಳ್ಳಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿರುವ ಎಲ್ಲ ಆಸ್ಪತ್ರೆಗಳು ಪೋರ್ಟಲ್ ಮಾರ್ಗಸೂಚಿ ಅನ್ವಯ ಸಮಯ ಮಿತಿಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.