ಹೊಸ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರ ಶೋಷಣೆ : ಕ್ಲಿಪ್ಟನ್ ರೊಜಾರಿಯೊ

ಬೆಂಗಳೂರು : ಹೊಸ ಕಾರ್ಮಿಕ ಸಂಹಿತೆಗಳು ಶೋಷಣೆಯನ್ನು ಸಾಂಸ್ಥಿಕಗೊಳಿಸುವ ಮೂಲಕ ಕಾರ್ಮಿಕರ ಬದುಕನ್ನು ಹದಗೆಡಿಸುತ್ತವೆ ಎಂದು ಅಖಿಲ ಭಾರತ ಕೇಂದ್ರ ಕಾರ್ಮಿಕ ಸಂಘಗಳ ಮಂಡಳಿಯ (ಎಐಸಿಸಿಟಿಯು) ಉಪಾಧ್ಯಕ್ಷ ಕ್ಲಿಫ್ಟನ್ ಡಿ. ರೊಜಾರಿಯೊ ತಿಳಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು)ಖಾಯಂ ಅಲ್ಲದ ಕಾರ್ಮಿಕರ ಜಂಟಿ ವೇದಿಕೆಯ ವತಿಯಿಂದ ಆಯೋಜಿಸಿದ್ದ ಹೊಸ ಕಾರ್ಮಿಕ ಸಂಹಿತೆ ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ, ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಬಿಎಂಪಿ ಪೌರಕಾರ್ಮಿಕರ ಸಂಘದ ಕಾರ್ಯದರ್ಶಿ ಮಣಿಯಮ್ಮ ಮಾತನಾಡಿದರು.
ಸಮಾವೇಶದಲ್ಲಿ ಕರ್ನಾಟಕ ಜನರಲ್ ಲೇಬರ್ ಯೂನಿಯನ್ (ಐಟಿಐ ಘಟಕ) ಅಧ್ಯಕ್ಷ ಹೇಮಂತ್ ಕುಮಾರ್, ನಿಮ್ಹಾನ್ಸ್ ಪ್ರಗತಿಪರ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ಜನರಲ್ ಲೇಬರ್ ಯೂನಿಯನ್ (ಐಟಿಐ ಘಟಕ) ಉಪಾಧ್ಯಕ್ಷ ಬಾಬು ವಿನೋದ್, ಎಚ್‌ಎಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
ಸಮಾವೇಶದ ನಿರ್ಣಯಗಳು
ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕು. ಸರಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಗುತ್ತಿಗೆ ಕಾರ್ಮಿಕ, ಹೊರಗುತ್ತಿಗೆ ಮತ್ತು ಸ್ಥಿರ-ಅವಧಿಯ ಉದ್ಯೋಗವನ್ನು ರದ್ದುಗೊಳಿಸಬೇಕು. ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ಮತ್ತು ತಿಂಗಳಿಗೆ 42,000 ರೂ. ಕನಿಷ್ಠ ವೇತನವನ್ನು ಘೋಷಿಸಬೇಕು. ಇಎಸ್‌ಐ ಕಾಯ್ದೆಯಡಿ 21 ಸಾವಿರ ರೂ. ಮಿತಿಯನ್ನು ತೆಗೆದುಹಾಕಿ ಎಲ್ಲ ಕಾರ್ಮಿಕರಿಗೆ ಇಎಸ್‌ಐ ಅನ್ನು ಖಚಿತಪಡಿಸಬೇಕು. ಎಲ್ಲ ಕಾರ್ಮಿಕರಿಗೆ ನ್ಯಾಯಯುತ ಮತ್ತು ಗೌರವಾನ್ವಿತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಬೇಕು. ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಮತ್ತು ಸಮಗ್ರ ಕೆಲಸದ ವಾತಾವರಣವನ್ನು ಒದಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.