ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು : ನಟ ಪ್ರಕಾಶ್ ರೈ
‘ಮಕ್ಕಳ ಲೋಕಕ್ಕೆ 14 ಪುಸ್ತಕಗಳು ಹಾಗೂ ಬಹುರೂಪಿ ಪುಸ್ತಕ ಕಿಟ್’ ಬಿಡುಗಡೆ

ಬೆಂಗಳೂರು : ‘ವಿದ್ಯಾವಂತರನ್ನಾಗಿ ಮಾಡುವ ವೇಗದಲ್ಲಿ ಮಕ್ಕಳಿಗೆ ಹಿಂಸೆ ನೀಡುವುದು ತಪ್ಪಬೇಕು’ ಎಂದು ಬಹುಭಾಷಾ ನಟ ಹಾಗೂ ನಿರ್ದಿಗಂತದ ರೂವಾರಿ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬಹುರೂಪಿ ಪ್ರಕಾಶನ, ಪರಾಗ್, ನಿರ್ದಿಗಂತ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ‘ಮಕ್ಕಳ ಲೋಕಕ್ಕೆ 14 ಪುಸ್ತಕಗಳು ಹಾಗೂ ಬಹುರೂಪಿ ಪುಸ್ತಕ ಕಿಟ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಅವರ ಮುಗ್ಧ ಸ್ವಾತಂತ್ರ್ಯವನ್ನು ಪೋಷಕರು ಕಿತ್ತುಕೊಳ್ಳಬಾರದು. ತಂದೆ-ತಾಯಿ ತಮ್ಮ ಮಕ್ಕಳಲ್ಲಿ ಅತಿಯಾದ ಶಿಸ್ತನ್ನು ಮೂಡಿಸಲು ಹೋಗಿ ಅವರಲ್ಲಿನ ಕ್ರಿಯಾಶೀಲತೆ, ಸೃಜನಶೀಲತೆಗೆ ಅವಕಾಶ ಮಾಡಿಕೊಡದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದರು.
ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು. ಅವರ ಕನಸುಗಳೇನು ಎಂಬುದನ್ನು ಅರಿತು ಅದರಂತೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ. ಮನುಷ್ಯ ನೈಸರ್ಗಿಕವಾಗಿ ಬೆಳವಣಿಗೆ ಸಾಧಿಸಿಲ್ಲ, ಬದಲಾಗಿ ನಿಯಂತ್ರಣಕ್ಕೊಳಪಟ್ಟು ಬೆಳೆಯುತ್ತಾ ಬಂದ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಪ್ರಕಾಶ್ ರಾಜ್ ವಿವರಿಸಿದರು.
ಇಂದಿನ ಕಾಲಮಾನದಲ್ಲಿ ಸಾಂಸ್ಕೃತಿಕವಾಗಿ ಮಕ್ಕಳು ಬೆರೆಯುವಂತಹ ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲ ವರ್ಷಗಳಿಂದ ಮಕ್ಕಳನ್ನು ‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ಪರಿಕಲ್ಪನೆಯಡಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಅವರು ತಿಳಿಸಿದರು.
ಬಹುರೂಪಿ ಸಂಸ್ಥಾಪಕ ಜಿ.ಎನ್.ಮೋಹನ್ ಮಾತನಾಡಿ, ಮಕ್ಕಳ ಸಾಹಿತ್ಯ ಪುಸ್ತಕಗಳ ಆಕಾರ, ಕ್ರಿಯಾಶೀಲತೆಗಳನ್ನೇ ಕಾನೂನು ಉಲ್ಲಂಘನೆ ಎಂದು ಸಾರ್ವಜನಿಕ ಹಾಗೂ ಇತರ ಗ್ರಂಥಾಲಯಗಳು ಭಾವಿಸುತ್ತಿವೆ. ಇಂಥ ಕ್ಷುಲ್ಲಕ ವಿಚಾರಕ್ಕೆ ಪುಸ್ತಕಗಳನ್ನೇ ಕೊಳ್ಳುವುದಿಲ್ಲ. ಇದು ಬದಲಾಗದಿದ್ದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಯುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಲೇಖಕ ಅಬ್ದುಲ್ ರೆಹಮಾನ್ ಪಾಷಾ ಮಾತನಾಡಿದರು. ಏಕಲವ್ಯ ಪ್ರಕಾಶನದ ಲಕ್ಷ್ಮೀ ಕರುಣಾಕರನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನದಿಯ ಹುಲಿ, ಅಪ್ಪುಕುಟ್ಟನನ್ನು ತೂಗುವುದು ಹೇಗೆ?, ಪಯಣಿಸುವ ಬೀಜಗಳು, ಅಯ್ಯೋ ಕಕ್ಕ...!, ಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆ, ನನ್ ಹೆಸ್ರೇ ಸಿನ್ನಮಾನ್, ಒಂದು ಬಕ್ಕೆಟ್ಟಿನಲ್ಲಿ ಸಮುದ್ರ, ಮೀನು ಸಾರು, ಕಟ್ ಪೀಸ್ ಕುಮಾರ, ಬೂ!, ಡಾ.ಬಿ.ಆರ್.ಅಂಬೇಡ್ಕರ್ ಇಲ್ಲ್ಯೂಸ್ಟ್ರೇಟೆಡ್, ಚಿಟ್ಟಿ, ಶಾಲೆಯಲ್ಲಿ ನನ್ನಜ್ಜ, ಹಾಗೂ ಅಮ್ಮ ಮತ್ತು ನಾನು ಎಂಬ ಹದಿನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಡಾ. ನೆಲ್ಲುಕುಂಟೆ ವೆಂಕಟೇಶ್, ಮಕ್ಕಳ ಗ್ರಂಥಾಲಯ ತಜ್ಞ ತೇಜಸ್ವಿ ಶಿವಾನಂದ್, ಟಾಟಾ ಟ್ರಸ್ಟ್‌ನ ವಿವೇಕ್ ಬಿ.ಜಿ, ಬಹುರೂಪಿ ಶ್ರೀಜಾ ವಿ.ಎನ್. ಹಾಗೂ ಇತರರಿದ್ದರು.