ಡಿ.ಕೆ.ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಲಿ: ರಂಭಾಪುರಿ ಶ್ರೀಗಳು

ಬೆಂಗಳೂರು : ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದು, ಅವರಿಗೆ ಇನ್ನೂ ಉನ್ನತ ಸ್ಥಾನ ಸಿಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಆ ಸ್ಥಾನ ಸಿಗಲಿ’ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದ ಅವರು, ಇತ್ತೀಚೆಗೆ ಶಿವಕುಮಾರ್ ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂಬ ಮಾತನ್ನು ಹೇಳಿದ್ದಾರೆ. ಶಿವಕುಮಾರ್ ಅವರ ಶ್ರಮಕ್ಕೆ ಪ್ರತಿಫಲ ಸಿಗಲಿ ಎಂದು ಹಾರೈಸಿದರು.
ಕೆಲ ರಾಜಕಾರಣಿಗಳು ಸಮಾಜದಲ್ಲಿ, ಜಾತಿ-ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ. ಹೀಗಾಗಿ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಬೇಕು. ಸಮಯ ಬಂದಾಗ ಶಿವಕುಮಾರ್ ದಿಟ್ಟ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಅವರು ನಂಬಿರುವ ದೈವ ಕೈಹಿಡಿದು ನಡೆಸಿ ಉನ್ನತ ಸ್ಥಾನಕ್ಕೆ ಮುನ್ನಡೆಸಲಿ ಎಂದು ಅವರು ಶುಭ ಕೋರಿದರು.
ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಪೀಠದ ವೀರ ಗಂಗಾಧರ ಶ್ರೀಗಳ ಮೇಲೆ ಡಿ.ಕೆ.ಶಿವಕುಮಾರ್ ಇಟ್ಟಿರುವ ಭಕ್ತಿ, ಶ್ರದ್ಧೆ, ಅಭಿಮಾನವನ್ನು ವರ್ಣಿಸಲು ಶಬ್ಧಗಳಿಲ್ಲ. ಗಂಗಾಧರ ಶ್ರೀಗಳ ಆಶೀರ್ವಾದದಿಂದ ತಮ್ಮ ಜೀವನದಲ್ಲಿ ಬಂದ ಕಷ್ಟಗಳು ಮಂಜಿನಂತೆ ಕರಗಿ ಮಾಯವಾಗಿವೆ ಎಂದು ಅವರು ತಿಳಿಸಿದ್ದಾರೆ ಎಂದು ಶ್ರೀಗಳು ನೆನಪು ಮಾಡಿಕೊಂಡರು.