ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಬೇಡಿ, ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ: ಪೂರ್ಣಾನಂದ ಪುರಿ ಸ್ವಾಮೀಜಿ ವಿರುದ್ಧ ರವಿಕುಮಾರ್ ವಾಗ್ದಾಳಿ

ಬೆಂಗಳೂರು: ರಾಜ್ಯ ಭೋವಿ ಸಮಾಜದ ಪ್ರಭಾವಿ ನಾಯಕರು ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಆಧಾರರಹಿತ ಸಲ್ಲದ ಆರೋಪ ಮಾಡಿರುವ ನೆಲಮಂಗಲ ಗಾಣಿಗ ಮಠದ ಪೂರ್ಣಾನಂದ ಪುರಿ ಸ್ವಾಮೀಜಿ ಮಠ ಬಿಟ್ಟು ರಾಜಕೀಯ ಪ್ರವೇಶಿಸಲಿ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಇಲ್ಲಿನ ವಿ.ವಿ. ಟವರ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಮೇಲೆ ಆಧಾರ ರಹಿತ ಹಾಗೂ ದುರುದ್ಧೇಶಪೂರ್ವಕವಾಗಿ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಲಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ರೀತಿ ವ್ಯರ್ಥ ಪ್ರಚಾರಕ್ಕೆ ಅವರು ಸುಳ್ಳು ಆರೋಪ ಮಾಡುವ ಬದಲಿಗೆ ಅವರು ರಾಜಕೀಯ ಕ್ಕೆ ಬರುವುದು ಒಳ್ಳೆಯದು ಎಂದು ಹೇಳಿದರು.
ಸ್ವಾಮೀಜಿ ಅವರು ವಾಸ್ತವ ಸಂಗತಿಗಳನ್ನು ಹೇಳುತ್ತಿಲ್ಲ. ಮಠದ ಅಭಿವದ್ಧಿಗಾಗಿ ಇದುವರೆಗೂ 8 ಕೋಟಿ ರೂ. ಬಿಡುಗಡೆ ಆಗಿದೆ. 2011-12ನೇ ಸಾಲಿನಲ್ಲಿ ರೂ 2 ಕೋಟಿ ರೂ. ಹಾಗೂ 2012-13ನೇ ಸಾಲಿನಲ್ಲಿ ಒಂದು ಕೋಟಿ ರೂ. ಮತ್ತು 2014-15ನೇ ಸಾಲಿನಲ್ಲಿ 2 ಕೋಟಿ ರೂ. ಸೇರಿ ಇಲ್ಲಿ ತನಕ ಮಠದ ಅಭಿವೃದ್ಧಿಗಾಗಿ ಒಟ್ಟು ಎಂಟುವರೆ ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಒದಗಿಸಲಾಗಿದೆ. ಈ ಬಗ್ಗೆ ದಾಖಲೆಗಳಿವೆ. ಇದರ 2011-12ನೇ ಸಾಲಿನಲ್ಲಿ ಮಂಡಿಸಿದ ಆಯವ್ಯಯದ ಭಾಷಣದ ಕಂಡಿಕೆಯಲ್ಲಿ ಗಾಣಿಗರ ಸಮುದಾಯದ ಗುರುಪೀಠ ಸ್ಥಾಪಿಸಲು 5 ಕೋಟಿ ರೂ.ಗಳನ್ನು ನೀಡುವುದು ಎಂದು ಘೋಷಿಸಲಾಗಿದೆ. ಇಷ್ಡಾಗಿಯೂ ವಾಸ್ತವ ಸಂಗತಿ ಮರೆ ಮಾಚಿ 1.50 ಕೋಟಿ ಕೊಡುವುದಕ್ಕೆ ಆರ್ಥಿಕ ಇಲಾಖೆ ನಿಬಂಧನೆಗಳಿವೆ. ಇದನ್ನು ಮರೆ ಮಾಚಿ ಸಚಿವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಗಾಣಿಗರ ಸಮುದಾಯದ ಟ್ರಸ್ಟ್ ಇವರ ವತಿಯಿಂದ ಸ್ಥಾಪನೆ ಯಾಗಿರುವ ವಿಶ್ವ ಗಾಣಿಗರ ಗುರುಪೀಠಕ್ಕೆ ಹಂತ- ಹಂತವಾಗಿ ಸರ್ಕಾರದಿಂದ ಇದುವರೆಗೂ 8 ಕೋಟಿ ರೂ. ಅನುದಾನ ಸಿಕ್ಕದೆ. ಇದರಲ್ಲಿ ಸಮುದಾಯ ಭವನ ನಿರ್ಮಾಣ, ಕಟ್ಟಡ ನಿರ್ಮಾಣ, ಶೈಕ್ಷಣಿಕ ಉದ್ದೇಶ, ಧಾರ್ಮಿಕ ಚಟುವಟಿಕೆ, ಆಸ್ಪತ್ರೆ ನಿರ್ಮಾಣ, ಆರೋಗ್ಯ ಕೇಂದ್ರ ಮತ್ತು ಅಂಗವಿಕಲರಿಗಾಗಿ ಶಾಲೆ ಸ್ಥಾಪನೆ ಮಾಡಲಾಗುವುದು ಎಂದು ಅನುದಾನವನ್ನು ಸರ್ಕಾರದಿಂದ ಪಡೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಉಪಯೋಗ ಆಗಿದೆ ಎನ್ನುವ ಬಗ್ಗೆ ಇದುವರೆಗೂ ಯಾವುದೇ ಪುರಾವೆ ಇಲ್ಲ. ಅಷ್ಟಾಗಿಯೂ ಈ ರೀತಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ತುಂಬಾ ಸಕ್ರಿಯವಾಗಿರುವ ಮತ್ತು ಜನಪರ ಕಾಳಜಿಯಲ್ಲಿ ಕೆಲಸ ಮಾಡುವ ಸಚಿವರಲ್ಲಿ ಶಿವರಾಜ್ ತಂಗಡಗಿ ಕೂಡ ಒಬ್ಬರು. ಅತ್ಯಂತ ಶೋಷಿತ ಸಮುದಾಯಗಳಲ್ಲಿ ಒಂದಾಗಿರುವ ಭೋವಿ ಸಮಾಜದ ಕಡು ಬಡ ಕುಟುಂಬದಿಂದ ಬಂದ ಶಿವರಾಜ್ ತಂಗಡಗಿ, ಶೋಷಿತ ಸಮುದಾಯದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದೆ ಮಾಡಿರುವ ಆರೋಪ ಇದಾಗಿದೆ ಎಂದು ದೂರಿದರು.
ಸ್ವಾಮೀಜಿ ಎನಿಸಿಕೊಂಡವರು ಒಂದು ಘನತೆಯಲ್ಲಿ ಬದುಕಬೇಕು. ಆದರೆ ಈ ಸ್ವಾಮೀಜಿ ಸುಖದಲ್ಲಿ ಬದುಕುವುದಕ್ಕಾಗಿ ರಾಜಕೀಯದಿಂದ ಹೊರ ಬಂದಂತೆ ತೋರಿಸಿ, ಈ ನಾಟಕ ಆಡುತ್ತಿದ್ದಾರೆ. ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.







