ಐಟಿಐ ಕಾರ್ಖಾನೆಗೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಭೇಟಿ

ಬೆಂಗಳೂರು : ಕೇಂದ್ರ ಸರಕಾರದ ಸಂಪರ್ಕ-ಸಂವಹನ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಗುರುವಾರ ನಗರದ ಕೆ.ಆರ್.ಪುರದಲ್ಲಿರುವ ಐಟಿಐ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿರಾಧಿತ್ಯ ಸಿಂಧ್ಯಾ, ಭಾರತದ ದೂರ ಸಂಪರ್ಕ ಪ್ರಯಾಣದ ಒಂದು ಪ್ರಮುಖ ಕೊಂಡಿಯಾಗಿರುವ ಬೆಂಗಳೂರಿನಲ್ಲಿರುವ ಐಟಿಐ ಕಾರ್ಖಾನೆಗೆ ಭೇಟಿ ನೀಡಿದ್ದು ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು ಎಂದು ಹೇಳಿದರು.
ಐಟಿಐ ಕಾರ್ಖಾನೆಯ ಐತಿಹಾಸಿಕ ಕಾರಿಡಾರ್‍ಗಳ ಮೂಲಕ ನಡೆಯುವುದು ಮತ್ತು ಯುವ ಮತ್ತು ಅನುಭವಿ ಮನಸ್ಸುಗಳೊಂದಿಗೆ ಸಂವಹನ ನಡೆಸುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು. ಸುರಕ್ಷಿತ ರಕ್ಷಣಾ ಸಂವಹನಗಳಿಂದ ಹಿಡಿದು ಫೈಬರ್ ಆಪ್ಟಿಕ್ಸ್ ಮತ್ತು ಸ್ಮಾರ್ಟ್ ಪರಿಹಾರಗಳವರೆಗೆ, ಐಟಿಐ ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ಬಿ.ಎ.ಬಸವರಾಜ, ಐಟಿಐ ಕಾರ್ಖಾನೆಯು ಈ ಭಾಗದ ಎಷ್ಟೋ ಬಡ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಂತಹ ಕಾರ್ಖಾನೆ. ಇದನ್ನು ಮತ್ತೆ ಪುನರ್ ಆರಂಭಿಸಿದರೆ ನನ್ನ ಕ್ಷೇತ್ರದ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಮತ್ತು ಹಲವಾರು ಅಭಿವೃದ್ಧಿ ಕಾರ್ಯಗಳಿಗೂ ಕಾರಣವಾಗಲಿದೆ ಎಂದು ಹೇಳಿದರು.
ಇದಲ್ಲದೇ, ಕೆ.ಆರ್.ಪುರ ಸರಕಾರಿ ಆಸ್ಪತ್ರೆಯ ಹಿಂಬದಿಯಲ್ಲಿರುವ ಐಟಿಐ ಕ್ವಾಟ್ರಸ್ ಗೇಟ್ ಕೊರೋನ ಸಂದರ್ಭದಲ್ಲಿ ಮುಚ್ಚಲಾಗಿತ್ತು. ಆನಂತರ, ಅದನ್ನು ತೆರೆಯಲಿಲ್ಲ. ಈ ಗೇಟ್ ತೆರೆದರೆ ಶಾಲಾ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಬಸವರಾಜ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಐಟಿಐನ ಆಡಳಿತ ಮಂಡಳಿಯ ಅಧಿಕಾರಿಗಳು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.







