ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಅಸಾಂಕ್ರಾಮಿಕ ರೋಗ ಹೆಚ್ಚಳ : ದಿನೇಶ್ ಗುಂಡೂರಾವ್

ಬೆಂಗಳೂರು: ದೇಶದ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚುತ್ತಿದ್ದು ಯುವಜನರಲ್ಲಿ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಡಾ.ಡಿ.ಚಿನ್ನಯ್ಯ ಸಭಾಂಗಣದಲ್ಲಿ ಜನಪ್ರಕಾಶನದ ವತಿಯಿಂದ ಆಯೋಜಿಸಿದ್ದ ಲೇಖಕಿ ಡಾ.ವಸುಂಧರಾ ಭೂಪತಿ ಅವರ ‘ಮಹಾತ್ಮಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’ ಹಾಗೂ ‘ಹಣ್ಣುಗಳು ಮತ್ತು ಆರೋಗ್ಯ’, ಪ್ರೊ.ಜಿ.ಶರಣಪ್ಪ ಅವರ ‘ಚಂದ್ರನ ಬೆಳಕಲ್ಲಿ’ ಸಣ್ಣ ಕಥೆಗಳ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಕೆಟ್ಟ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗಿದ್ದವು. ಹಾಗಾಗಿ ಜನರ ಜೀವಿತಾವಧಿ ಕನಿಷ್ಠ 30ರಿಂದ 35 ಇತ್ತು. ಮಲೇರಿಯಾ, ಟೈಫಾಯ್ಡ್, ಪ್ಲೇಗ್ ಸೇರಿದಂತೆ ಇತರೆ ಸಾಂಕ್ರಾಮಿಗಳ ರೋಗಗಳಿಂದ ಕಡಿಮೆ ವಯಸ್ಸಿನಲ್ಲೇ ಮರಣ ಹೊಂದುತ್ತಿದ್ದರು. ಈಗ ಬಹುತೇಕ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಒಂದು ಹಂತಕ್ಕೆ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದಿವೆ ಎಂದರು.
ಪ್ರಸ್ತುತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಅಸಾಂಕ್ರಾಮಿಕ ರೋಗಗಳಿಂದ ಮರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಕಾಯಿಲೆಗಳು ಅನುವಂಶೀಯವಾಗಿ ಬಂದಿರಬಹುದು ಅಥವಾ ಜೀವನ ಶೈಲಿಯಿಂದ ಬಂದಿರಬಹುದು. ಹೃದಯಾಘಾತ, ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿವೆ. ಪಾಶ್ರ್ವವಾಯು ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಇದಕ್ಕೆಲ್ಲಾ ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಜೀವನ ಶೈಲಿ ಕಾರಣ ಎಂದು ತಿಳಿಸಿದರು.
ಇಂದು ಮಧುಮೇಹ, ರಕ್ತದ ಒತ್ತಡ ಕಡಿಮೆ ವಯಸ್ಸಿನ ಯುವಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಯಾವ ರಾಜ್ಯಗಳು ಅಭಿವೃದ್ಧಿಯಾಗಿದೆಯೋ ಅಲ್ಲಿ ಆದಾಯ ಹೆಚ್ಚಿರುತ್ತದೆ. ಖರ್ಚು ಮಾಡುವ ಸಾಮಥ್ರ್ಯವೂ ಇರುತ್ತದೆ. ಓಡಾಟ ಕಡಿಮೆಯಾಗಿದ್ದು ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ. ಸಂಸ್ಕರಿಸಿದ ಆಹಾರ ಸೇವನೆ ಹೆಚ್ಚಾಗಿದೆ. ಪರಿಸರ ಮಾಲಿನ್ಯದಲ್ಲಿ ಬದುಕು ನಡೆಸುವ ಸ್ಥಿತಿ, ಜೊತೆಗೆ ಮಾದಕ ವಸ್ತುಗಳ ಸೇವನೆಯಿಂದ ಮರಣ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಹೆಚ್ಚು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಪೆÇ್ರ.ಬಿ.ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಜನ ಪ್ರಕಾಶನ ಸಂಸ್ಥೆಯ ಬಿ.ರಾಜಶೇಖರ ಮೂರ್ತಿ, ಲೇಖಕಿ ಡಾ.ವಸುಂಧರಾ ಭೂಪತಿ, ಪ್ರೊ.ಬಿ.ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು.







