ನಾಪತ್ತೆ, ಪೋಕ್ಸೋ ಪ್ರಕರಣಗಳ ತಡೆಗೆ ಅಗತ್ಯ ಕ್ರಮ : ಎನ್.ಎಚ್.ಕೋನರಡ್ಡಿ

ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು, ಪೋಕ್ಸೋ ಪ್ರಕರಣಗಳು ಕಂಡುಬಂದಿದ್ದು, ಅವುಗಳನ್ನು ತಡೆಗಟ್ಟುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ ಎಂದು ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎನ್.ಎಚ್.ಕೋನರಡ್ಡಿ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಇದೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಸಭೆ ನಡೆಸಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೊದಲನೆಯ ಹಾಗೂ ಅತ್ಯಂತ ಮಹತ್ವದ ಸಭೆ ಇದಾಗಿದೆ, ಮುಖ್ಯವಾಗಿ ನಾಪತ್ತೆ ಪ್ರಕರಣಗಳು, ಪೋಕ್ಸೋ, ಮಕ್ಕಳ ಅಪಹರಣ, ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕರ ನೇಮಕಾತಿ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಅಲ್ಲದೇ, ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಪಡೆದುಕೊಳ್ಳುವ ಬಗ್ಗೆ, ತೆರೆದ ಮನೆ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಬಗ್ಗೆ, ಅಪಹರಣ ಪ್ರಕರಣಗಳಲ್ಲಿ ಪೋಲೀಸರು ಶೀಘ್ರವಾಗಿ ಪತ್ತೆ ಮಾಡುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಯಿತು ಎಂದು ಕೋನರೆಡ್ಡಿ ತಿಳಿಸಿದರು.
ಇಲ್ಲಿ ಚರ್ಚಿಸಲಾದ ವಿಷಯಗಳ ಗಂಭೀರತೆ ಕುರಿತು ಕುರಿತು ಸರಕಾರದ ಗಮನಕ್ಕೆ ತರಲಾಗುವುದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿನ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯ ಅನುಷ್ಠಾ ನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಜ್ಯ ಸರಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಇಲಾಖೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ, ಈ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಅಗತ್ಯವಾದ ಸಲಹೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಕೋನರೆಡ್ಡಿ ತಿಳಿಸಿದರು.
ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಕೆ, ಬಾಲ ವಿಕಾಸ ಮಂದಿರ, ಅನಾಥಾಶ್ರಮಗಳು ಈ ಇಲಾಖೆಯ ವ್ಯಾಪ್ತಿಗೆ ಬರುತ್ತವೆ, ಈ ಕುರಿತು ಸಮಗ್ರವಾಗಿ ಚರ್ಚಿಸಿ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಲಿದೆ, ಜಿಲ್ಲೆಯಲ್ಲಿ 104 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಕಾಣೆಯಾದವರ ಪತ್ತೆ ಪ್ರಕರಣಗಳಲ್ಲಿ ಒಂದು ಪ್ರಕರಣ ಮಾತ್ರ ಬಾಕಿ ಇದೆ. ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ ಇಲಾಖೆಯು ಜಂಟಿಯಾಗಿ ಶಾಲಾ, ಕಾಲೇಜುಗಳಲ್ಲಿ ಕಾಣೆಯಾದವರ ಕುರಿತು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಎಚ್.ಎ.ಇಕ್ಬಾಲ್ ಹುಸೇನ್, ಉದಯ್ ಗರುಡಾಚಾರ್, ಕೊತ್ತೂರು ಜಿ.ಮಂಜುನಾಥ್, ಕರೆಮ್ಮ ನಾಯ್ಕ, ಶರಣಗೌಡ ಕಂದಕೂರು, ಡಾ.ಚಂದ್ರಶೇಖರ ಬಸವರಾಜ ಪಾಟೀಲ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.







