ರಂಭಾಪುರಿ ಸ್ವಾಮೀಜಿ ಹೇಳಿಕೆ ರಾಜಕೀಯ ಪ್ರೇರಿತ : ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು : ಅಹಿಂದ ವರ್ಗಗಳು ಜನಾಭಿಪ್ರಾಯ ಪಡೆದು ಅಧಿಕಾರ ಪಡೆದ ಹಲವು ಸಂದರ್ಭಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ, ರಂಭಾಪುರಿ ಶ್ರೀಗಳು ಯಾವ ಸಾಮಾಜಿಕ ರಚನೆಯ ಭಾಗವಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಾಸೋಹದ ಕಲ್ಪನೆಗೆ ಹತ್ತಿರವಾಗಿರುವ ಮಠವೊಂದರ ಮಠಾಧಿಪತಿಯಾಗಿದ್ದೂ ಸಹ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ರಂಭಾಪುರಿ ಶ್ರೀಗಳ ಮಾತುಗಳು ಹೆಚ್ಚು ರಾಜಕೀಯ ಪ್ರೇರಿತವಾಗಿವೆ ಮತ್ತು ಶೂನ್ಯಮಟ್ಟದ ಜನಪರತೆಯ ನಿಲುವಿನ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ನಮಗೆ ತಿಳಿದಂತೆ ಬಿಜೆಪಿ ಮತ್ತು ಬಂಡವಾಳಶಾಹಿ ಮನಸ್ಸುಗಳು ರೈತ ಪರವಾದ ಭೂ ಸುಧಾರಣೆ ಕಾಯ್ದೆಯಿಂದ ಹಿಡಿದು, ಅನ್ನಭಾಗ್ಯ ಯೋಜನೆಯ ವರೆಗೆ ಎಲ್ಲವನ್ನೂ ಕೂಡ ವಿರೋಧಿಸಿಕೊಂಡೇ ಬಂದಿವೆ. ಇನ್ನು ಸಾಮಾಜಿಕ ನ್ಯಾಯದ ಪರವಾಗಿರುವ ಮೀಸಲಾತಿಗೆ ಸಂಬಂಧಿಸಿದಂತೆಯೂ ಇರುವ ಇವರ ನಿಲುವುಗಳು ಎಂತವು ಎಂಬುದಕ್ಕೆ ಮಂಡಲ್ ವರದಿಯ ನಿರಾಕರಣೆಯ ಕಾಲದಿಂದಲೂ ಇರುವ ಇವರ ವಿರೋಧಿ ನಿಲುವನ್ನೆ ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಮಹದೇವಪ್ಪ ತಿಳಿಸಿದ್ದಾರೆ.
ರಾಜಕಾರಣದಲ್ಲಿ ಧರ್ಮ ಪ್ರವೇಶ ಮಾಡಬಾರದು ಎಂಬ ಆಶಯ ಗೊತ್ತಿದ್ದಾಗಲೂ ಸಹ ಈಗಾಗಲೇ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವದ ಭಾಗವಾಗಿ ಧರ್ಮ ಪ್ರವೇಶ ಮಾಡಿಯಾಗಿದೆ. ಆದರೆ ಕನಿಷ್ಠ ಪಕ್ಷ ಅದು ಆರೋಗ್ಯಕರವಾಗಿ ಇರುವ ರೀತಿಯಲ್ಲಿ ರಂಭಾಪುರಿ ಶ್ರೀಗಳು ಎಚ್ಚರ ವಹಿಸಬೇಕೆಂದು ನಾನು ಆಶಿಸುವೆ ಎಂದು ಅವರು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಕೊರೋನ ನಂತರದ ಸಂದರ್ಭದಲ್ಲಿ, ದುಡಿಮೆ ಇಲ್ಲದೇ ಬದುಕಿಲ್ಲದೇ ಜನರು ಅನುಭವಿಸಿದ್ದ ಆ ಮಹಾಕಷ್ಟದ ಅರಿವು ಶ್ರೀಗಳಿಗೆ ಇದ್ದಿದ್ದರೆ ಅವರು ಖಂಡಿತಾ ಬಿಜೆಪಿಯವರ ರೀತಿಯಲ್ಲಿ ಹೀಗೆ ಅಸೂಕ್ಷ್ಮದ ಮಾತನ್ನು ಆಡುತ್ತಿರಲಿಲ್ಲ ಎಂದು ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕವಾಗಿ ಮಾರ್ಗದರ್ಶಿ ಸ್ತರದಲ್ಲಿ ಇರುವ ಶ್ರೀಗಳು ಬಡವರ ವಿಷಯದಲ್ಲಿ ಆತುರವಾಗಿ ಮಾತನಾಡದೇ ಹೃದಯ ಬಳಸಿ ಇಲ್ಲವೇ ಮಠಗಳ ಮೂಲ ತಿಳುವಳಿಕೆಯನ್ನು ಬಳಸಿ ಮಾತನಾಡಿದರೆ ಹೆಚ್ಚು ಅರ್ಥಪೂರ್ಣ ಎಂದು ಅವರು ಸಲಹೆ ನೀಡಿದ್ದಾರೆ.







