ಯುವಜನತೆ ಮೊಬೈಲ್ ಗೀಳಿನಿಂದ ಹೊರಬರಲಿ : ಬಾನು ಮುಷ್ತಾಕ್

ಬೆಂಗಳೂರು : ಲೇಖಕರಾಗಬೇಕೆಂದು ಬಯಸುವ ಯುವಕ, ಯುವತಿಯರು ಮೊದಲು ಅನುಭವ ಸಂಪಾದನೆ ಮಾಡಬೇಕು. ಸಾಹಿತ್ಯ ಅಭಿವ್ಯಕ್ತಿಯನ್ನು ಸಾಧಿಸಬೇಕೆಂದರೆ ಮೊಬೈಲ್ ಗೀಳಿನಿಂದ ಹೊರಬಂದು ಕೆಲಸ ಮಾಡಬೇಕೆಂಬ ದೃಢ ನಿರ್ಧಾರ ಕೈಗೊಳ್ಳಬೇಕು. ಹತ್ತು ಸಾವಿರ ಗಂಟೆಯ ಪ್ರಯತ್ನದಿಂದ ವ್ಯಕ್ತಿ ಪರಿಪೂರ್ಣ ಆಗುತ್ತಾನೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಥಾಪನ ದಿನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಮಹಿಳೆಯರು ರಾಜಕೀಯ, ಧರ್ಮ, ಲೈಂಗಿಕತೆ ಕುರಿತು ಬರೆಯಲು ಅನೇಕ ನಿರ್ಬಂಧಗಳಿವೆ. ನನ್ನ ಮೇಲೆ ಇಲ್ಲಿಯವರೆಗೆ 9 ದಾಳಿಗಳಾಗಿವೆ. ಆದರೂ ನಾನೂ ಧರ್ಮವನ್ನು, ಪುರುಷ ಪ್ರದಾನತೆಯನ್ನು ಪ್ರಶ್ನೆ ಮಾಡದೆ ಸುಮ್ಮನಿರುವುದಿಲ್ಲ ಎಂದರು.
ಮನೆಗಳಲ್ಲಿ ಹೆಣ್ಣು ಮಕ್ಕಳು ಅಡುಗೆ, ಮನೆಗೆಲಸ, ಗಂಡ ಮಕ್ಕಳ ಸೇವೆಯಂತ ಹಲವು ಕೆಲಸದ ಒತ್ತಡಗಳ ಜೊತೆಗೆ ಹೊರಗಡೆಯೂ ಹೋಗಿ ದುಡಿಯಬೇಕು. ಈ ಒತ್ತಡ ಗಂಡಸ್ಸರಿಗೆ ಇಲ್ಲ. ಆದುದರಿಂದ ಹೆಣ್ಣುಮಕ್ಕಳು ದಕ್ಷರಲ್ಲ ಅನ್ನುವ ಮಾತು ಸುಳ್ಳು. ಪುರುಷರು ಹೆಣ್ಣಿನ ಕುರಿತು ಸಂವೇದನಶೀಲರಾಗಬೇಕು. ಧರ್ಮಗಳಲ್ಲಿ ಅನೇಕ ಒಳ್ಳೆಯ ಅಂಶಗಳಿದ್ದರೂ, ಹೆಣ್ಣನ್ನು ಪುರುಷ ಪ್ರದಾನ ವ್ಯವಸ್ಥೆ ತನ್ನ ಗುಲಾಮಳಾಗಿ ಇರಿಸಿಕೊಂಡಿದೆ ಎಂದು ಬಾನು ಮುಷ್ತಾಕ್ ಬೇಸರ ವ್ಯಕ್ತಪಡಿಸಿದರು.
ಸಂಸಾರದ ಸುಳಿಯಲ್ಲಿ ಸಿಕ್ಕು ನನ್ನ ಬರವಣಿಗೆಯ ಹಂಬಲವು ತುಕ್ಕು ಹಿಡಿಯುತ್ತಿದೆ ಎಂದು ಅನಿಸಿದಾಗ ಖಿನ್ನಳಾಗಿ ಪೆಟ್ರೋಲ್ ಸುರಿದುಕೊಂಡು ಸಾಯಲು ಮುಂದಾದಾಗ ನನ್ನ ಗಂಡ ತಡೆದರು. ಇದನ್ನು ನಾನೂ ಹಲವು ಕಡೆ ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದೇನೆ. ಮದುವೆಯಾದ 2-3 ತಿಂಗಳಿಗೆ ವಧುಗಳು ಭಾವನಾತ್ಮಕವಾಗಿ ಕುಗ್ಗಿ ಪ್ರಾಣ ಕಳೆದುಕೊಳ್ಳಲು ಮುಂದಾಗುತ್ತಾರೆ. ಅಂತಹವರನ್ನು ಹೀಗಳೆಯದೆ, ಬಯ್ಯದೆ ಸಾಂತ್ವಾನದ ಮಾರ್ಗದರ್ಶನ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಬೂಕರ್ ಪ್ರಶಸ್ತಿ ಪುರುಸ್ಕೃತರಾದ ನಿಮಗೆ ಇದುವರೆಗೂ ದೇಶದ ಪ್ರಧಾನಿ ಏಕೆ ಶುಭಾಶಯ ಕೋರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಸಣ್ಣಕಥೆಗಳಿಗೆ ಬೂಕರ್ ಪ್ರಶಸ್ತಿ ಸಿಗುವುದಿಲ್ಲ ಎಂದು ಲಂಡನ್‍ನಲ್ಲಿ ಹಲವರು ಹೇಳುತ್ತಿದ್ದರು. ಅದಕ್ಕೆ ಕಿವಿಗೊಡದೆ, ಸಿಕ್ಕೇಸಿಗುತ್ತದೆ ಎಂದು ನಂಬಿದೆ. ಅದೇ ರೀತಿಯಲ್ಲಿ ಪ್ರಧಾನ ಮಂತ್ರಿಗಳು ಒಂದಲ್ಲ ಒಂದು ದಿನ ಶುಭಾಶಯ ಕೋರಬಹುದು ಎಂದು ಭಾವಿಸುವೆ ಎಂದು ಬಾನು ಮುಷ್ತಾಕ್ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.







